2013ರಲ್ಲಿ ಬಿಡುಗಡೆಯಾದ, ಕಂಗನಾ ರಣಾವತ್ ಅಭಿನಯದ ಕ್ವೀನ್ ಸಿನಿಮಾದಲ್ಲಿ ನಾಯಕಿ ರಾಣಿಯ ಮದುವೆ ಒಂದು ದಿನ ಮೊದಲು ಮುರಿದು ಬೀಳುತ್ತದೆ. ಆಕೆ ಪತಿಯಾಗಬೇಕಿದ್ದವನು ಮುನ್ನಾದಿನ ಮದುವೆಯನ್ನು ಮುರಿದುಕೊಳ್ಳುತ್ತಾನೆ. ಹೀಗಾಗಿ ರಾಣಿ ಏಕಾಂಗಿಯಾಗಿ ಹನಿಮೂನ್ ಟ್ರಿಪ್ ಕೈಗೊಳ್ಳುತ್ತಾಳೆ. ಒಬ್ಬಳೇ ಹೋಗುತ್ತಾಳೆ. ಆದರೆ ಈ 2023ರ ‘ಈ ಕ್ವೀನ್’ ಹಾಗಲ್ಲ. ಮದುವೆ ಬೇಡವೆಂದು ಎದ್ದು ಹೋದವನ 20 ಕಿಮೀ ದೂರ ಬೆನ್ನಟ್ಟಿ ಹೋಗಿ, ವಾಪಸ್ ಕರೆದುಕೊಂಡು ಬಂದು ಮಂಟಪದಲ್ಲಿ ಕೂರಿಸಿ ಮದುವೆಯಾಗಿದ್ದಾಳೆ. ಅಂದಹಾಗೇ, ಇದು ಯಾವುದೇ ಸಿನಿಮಾ ಕಥೆಯಲ್ಲ..ಉತ್ತರ ಪ್ರದೇಶದ ಬರೇಲಿಯಲ್ಲಿ (Bareilly Bride) ವಾಸ್ತವವಾಗಿ ನಡೆದಿದ್ದು.
ಬರೇಲಿಯ ಬರದರಿ ಎಂಬ ಏರಿಯಾದ ಯುವತಿ ಬದೌನ್ ಜಿಲ್ಲೆಯ ಯುವಕನೊಂದಿಗೆ ಎರಡೂವರೆ ವರ್ಷಗಳಿಂದಲೂ ಪ್ರೀತಿಯಲ್ಲಿದ್ದಳು. ಇವರಿಬ್ಬರ ಮಧ್ಯೆ ದೈಹಿಕ ಸಂಪರ್ಕವೂ ಇತ್ತು. ಸಂಬಂಧ ಮನೆಯಲ್ಲಿ ಗೊತ್ತಾಗಿ ಸ್ವಲ್ಪ ರಾದ್ಧಾಂತವೇ ಆಗಿತ್ತು. ಅಂತೂ ಎರಡು ಕುಟುಂಬಗಳ ನಡುವಿನ ಹಲವು ಸುತ್ತಿನ ಮಾತುಕತೆಯ ನಂತರ, ಇವರಿಬ್ಬರ ಮದುವೆಯನ್ನು ಮೇ 21ರಂದು ಭೂತನಾಥ ದೇಗುಲದಲ್ಲಿ, ಸರಳವಾಗಿ ಮಾಡುವುದು ಎಂದು ನಿಶ್ಚಯ ಮಾಡಲಾಗಿತ್ತು.
ಅಂದು ವಧು ಮತ್ತು ಆಕೆಯ ಕಡೆಯವರೆಲ್ಲ ಮಂಟಪಕ್ಕೆ ಬಂದು ತುಂಬ ಹೊತ್ತಾಗಿತ್ತು. ಆದರೆ ವರನಾಗಲೀ, ಆತನ ಕುಟುಂಬದವರಾಗಲೀ ಎಷ್ಟೇ ಹೊತ್ತಾದರೂ ಬರಲಿಲ್ಲ. ವಧುವಂತೂ ಅಲಂಕಾರ ಮಾಡಿಕೊಂಡು ಕಾದಿದ್ದೇ ಬಂತು. ತುಂಬ ಸಮಯವಾದ ಬಳಿಕ ವಧು ತನ್ನ ವರನಿಗೆ ಕರೆ ಮಾಡಿದಳು. ಆಗ ಫೋನ್ ಎತ್ತಿಕೊಂಡ ಆತ, ನನ್ನ ಅಮ್ಮ ಬಡೌನ್ನಲ್ಲಿ ಇದ್ದಾಳೆ. ಆಕೆಯನ್ನು ಕರೆದುಕೊಂಡು ಬರಲು ಇಲ್ಲಿಗೆ ಬಂದಿದ್ದೇನೆ. ಕೆಲವೇ ಹೊತ್ತಲ್ಲಿ ಬರುತ್ತೇನೆ ಎಂದು ಹೇಳಿದ್ದ. ಆದರೆ ಅದು ನಿಜವಾಗಿರಲಿಲ್ಲ.
ಇದನ್ನೂ ಓದಿ: ವಧುವಿನ ಹಣೆಗೆ ಸಿಂಧೂರ ಇಡುವ ಬದಲು ಎಲ್ಲೆಲ್ಲೋ ಸಿಂಪಡಿಸಿದ ವರ; ಮದುವೆಯೇ ಬೇಡವೆಂದು ಎದ್ದು ನಡೆದ ಯುವತಿ
ವರ ಕೊಟ್ಟ ಉತ್ತರ ಕೇಳಿ ವಧುವಿಗೆ ಅನುಮಾನ ಬಂದೇ ಹೋಯಿತು. ಈ ಮದುವೆ ಬಗ್ಗೆ ಮೊದಲಿನಿಂದಲೂ ಅಷ್ಟೆಲ್ಲ ಆಸಕ್ತಿ ತೋರಿಸದೆ ಇದ್ದ ಅವನು ಈಗ ತಪ್ಪಿಸಿಕೊಳ್ಳಲೆಂದೇ ಹೀಗೆ ಮಾಡುತ್ತಿದ್ದಾನೆ ಎಂದು ಅರಿತ ವಧು ಕೂಡಲೇ ಮದುವೆಮನೆಯಿಂದ ಯುವಕನನ್ನು ಕರೆದುಕೊಂಡು ಬರಲು ಹೋದಳು. ಆತ ಬರೇಲಿಯಿಂದ 20 ಕಿಮೀ ದೂರದಲ್ಲಿ, ಭಿಮೋರಾ ಪೊಲೀಸ್ ಸ್ಟೇಶನ್ ಬಳಿ ಬಸ್ಗಾಗಿ ಕಾಯುತ್ತ ನಿಂತಿದ್ದ. ಅಲ್ಲಿಗೇ ಹೋದ ವಧು, ಆತನಿಗೆ ಸರಿಯಾಗಿ ಛೀಮಾರಿ ಹಾಕಿದ್ದಾಳೆ. ಕೆಲವು ಹೊತ್ತು ಇವರಿಬ್ಬರ ಮಧ್ಯೆ ವಾಗ್ವಾದ ನಡೆಯಿತು. ಪಟ್ಟು ಹಿಡಿದ ವಧು ಕೊನೆಗೂ ವರನನ್ನು ವಾಪಸ್ ಭೂತನಾಥ ದೇಗುಲಕ್ಕೆ ಕರೆತಂದು, ತಾಳಿ ಕಟ್ಟಿಸಿಕೊಂಡಿದ್ದಾಳೆ. ಬಳಿಕ ಅವರು ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಇದೀಗ ಹನಿಮೂನ್ಗೆ ಹೋಗಲು ಸಜ್ಜಾಗಿದ್ದಾಳೆ.