ಲಖನೌ: ಬಾಲಿವುಡ್‌ನಲ್ಲಿ 2019ರಲ್ಲಿ ಒಂದು ಸಿನಿಮಾ ರಿಲೀಸ್ ಆಗಿತ್ತು. ಆಯುಷ್ಮಾನ್ ಖುರಾನಾ ನಟಿಸಿದ ಬಾಲಾ. ಈ ಚಿತ್ರದಲ್ಲಿ ಬಾಲಮುಕುಂದನ್ ಎಂಬ ಹುಡುಗ ತನ್ನ ʻಬಾಲ್ಡಿʼ ಶಿಕ್ಷಕರನ್ನು ವಿಪರೀತವಾಗಿ ಕಾಡುತ್ತಾನೆ. ಅದೇ ಹುಡುಗನಿಗೆ ಕೆಲವು ವರ್ಷಗಳ ನಂತರ ಕೂದಲು ಉದುರಲು ಆರಂಭವಾಗುತ್ತದೆ. ಆಗ ಆತ ತನ್ನ ತಂದೆಯನ್ನು ದೂರಲು ಆರಂಭಿಸುತ್ತಾನೆ. ಬಾಲ್ಡಿ ತಂದೆಯ ವಂಶವಾಹಿಯ ಕಾರಣದಿಂದಲೇ ತನಗೆ ಹೀಗಾಗಿದೆ ಎನ್ನುವುದು ಆತನ ತಕರಾರು. ಉದುರುವ ಕೂದಲಿನಿಂದ ಸಾಕಷ್ಟು ಹಿಂಸೆ ಅನುಭವಿಸುವ ಆತನಿಗೆ ಕೊನೇಗೆ ಇದೆಲ್ಲ ಸಹಜ ಎನ್ನುವ ಪರಿಜ್ಞಾನ ಮೂಡುತ್ತದೆ. ಹೀಗೆ ಕೂದಲು ಉದುರಿದೆ ಎಂಬ ಕಾರಣಕ್ಕೆ ಯಾರನ್ನೂ ಅಪಮಾನಿಸಬೇಡಿ ಎಂಬ ಒಳ್ಳೆಯ ಸಂದೇಶವಿರುವ ಚಿತ್ರವಿದು. ಕನ್ನಡದಲ್ಲಿ ರಾಜ್ ಬಿ. ಶೆಟ್ಟಿ ಅವರ ಒಂದು ಮೊಟ್ಟೆಯ ಕಥೆ ಇಂಥಹುದೇ ಕಥೆಯನ್ನು ಹೊಂದಿದೆ.
ಈ ಕಥೆಯನ್ನು ನೆನಪಿಸುವ ಘಟನೆಯೊಂದು ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಇಲ್ಲೊಬ್ಬ ಯುವಕ ತಲೆ ಕೂದಲು ಉದುರಿದ ಕಾರಣಕ್ಕೆ ವಿಗ್ ಧರಿಸುತ್ತಿದ್ದ. ಆತನಿಗೆ ಮದುವೆ ನಿಶ್ಚಯವಾಗುತ್ತದೆ. ಯುವಕ ತನ್ನೆಲ್ಲ ಗುಣ ವಿಶೇಷಣಗಳನ್ನು ಬಣ್ಣ ಬಣ್ಣದ ಮಾತುಗಳಿಂದ ಯುವತಿಗೆ ವಿವರಿಸಿದ್ದನಾದರೂ ತನ್ನ ತಲೆ ಬೋಳು, ಹಾಕಿಕೊಂಡಿರುವುದು ವಿಗ್ ಎಂದು ಎಲ್ಲೂ ಹೇಳಿರುವುದಿಲ್ಲ.
ಈ ನಡುವೆ ಮದುವೆ ಸಮಾರಂಭ ಶುರುವಾಗಿ ಅರ್ಥ ಭಾಗ ಮುಗಿದಿತ್ತು. ಅಷ್ಟು ಹೊತ್ತಿಗೆ ಹುಡುಗನ ʻವಿಗ್ ಕಳಚಿ ಬಿತ್ತುʼ! ಭಾವಿ ಗಂಡನಿಗೆ ಕೂದಲು ಇಲ್ಲ ಎನ್ನುವುದನ್ನು ತಿಳಿದ ವಧು ಯಾವ ಕಾರಣಕ್ಕೂ ಮದುವೆ ಮುಂದುವರಿಸಬಾರದು ಎಂದು ತಾಕೀತು ಮಾಡಿದಳು.
ಇದನ್ನೂ ಓದಿ | Viral Video: ಶಾಲಾ ಸಮವಸ್ತ್ರದಲ್ಲಿಯೇ ಬೀದಿಯಲ್ಲಿ ಬಡಿದಾಡಿಕೊಂಡ ಹುಡುಗಿಯರು
ಕಳಚಿ ಬಿದ್ದಿದ್ದು ಹೇಗೆ?
ವರನ ವಿಗ್ ಕಳಚಿ ಬಿದ್ದಿದ್ದು ಕೂಡಾ ಒಂದು ವಿಚಿತ್ರ ವಿದ್ಯಮಾನದಲ್ಲೇ. ಮದುವೆಯ ಬಹುತೇಕ ಭಾಗ ಮುಗಿದಿತ್ತು. ಒಂದು ಕಾರ್ಯಕ್ರಮ ಮುಗಿಸಿ ಇನ್ನೊಂದು ಕಾರ್ಯಕ್ರಮಕ್ಕೆ ವರನ ಮಂಟಪಕ್ಕೆ ಬರುತ್ತಿದ್ದ. ಕಳೆದ ರಾತ್ರಿಯಿಂದಲೇ ನಿದ್ದೆಗೆಟ್ಟಿದ್ದರಿಂದಲೋ ಏನೋ ಆತನಿಗೆ ತಲೆ ತಿರುಗಿ ಅಲ್ಲೇ ಬಿದ್ದುಬಿಟ್ಟ. ಆಗ ವಿಗ್ ಕಳಚಿಬಿತ್ತು. ಎಲ್ಲರೂ ಹುಡುಗನಿಗೇನಾಯ್ತಪ್ಪಾ ಅಂತ ಕಳವಳಪಡುತ್ತಿದ್ದರೆ ಹುಡುಗಿಯ ಕಣ್ಣು ಬಿದ್ದಿದ್ದು ಅವನ ಬೋಳು ತಲೆಯ ಮೇಲೆ. ಹುಡುಗನ ಆರೋಗ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಆಕೆ ಯಾವ ಕಾರಣಕ್ಕೂ ಮದುವೆ ಮುಂದುವರಿಸಬಾರದು ಎಂದು ತಾಕೀತು ಮಾಡಿದಳು.
ಮದುವೆಗೆ ಮೊದಲು ಈ ವಿಷಯವನ್ನು ತಿಳಿಸದೆ ಇದ್ದುದು ಆಕೆಯ ಕೋಪವನ್ನು ಇನ್ನಷ್ಟು ಹೆಚ್ಚಿಸಿತ್ತು. ಮದುವೆಯಾದ ಬಳಿಕವೂ ಆತ ಬೇರೆ ವಿಚಾರದಲ್ಲಿ ಮೋಸ ಮಾಡಬಹುದಲ್ಲ ಎಂದು ವಾದಿಸಿದಳು. ಜತೆಗೆ ಗೆಳತಿಯರ ಮುಂದೆ ಗಂಡನ ಬಣ್ಣ ಕಳಚಿ ಬಿದ್ದಿದ್ದು ಆಕೆಗೆ ಅಪಮಾನವಾಗಿತ್ತು. ನಿಜವೆಂದರೆ, ಆಕೆಯ ಮನೆಯವರೇ ಅಕೆಯನ್ನು ಸಾಕಷ್ಟು ಸಮಾಧಾನ ಮಾಡಲು ಪ್ರಯತ್ನಿಸಿದರಾದರೂ ಆಕೆ ಯಾರ ಮಾತನ್ನೂ ಕೇಳಲಿಲ್ಲ.
ಪೊಲೀಸ್ ಠಾಣೆ ಹತ್ತಿದ ಪ್ರಕರಣ
ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಲುಪಿ ಅವರು ಮನವೊಲಿಸಿದರೂ ಹುಡುಗಿ ಮಾತ್ರ ಕೇಳಲೇ ಇಲ್ಲ. ಮದುವೆ ಆಗುವುದೇ ಇಲ್ಲ ಎಂದು ಹಠ ಹಿಡಿದಳು. ಈ ನಡುವೆ, ಪಂಚಾಯಿತಿಯೊಂದು ನಡೆಯಿತು. ಅದರಲ್ಲಿ ಹುಡುಗಿಯ ಕುಟುಂಬದವರೆಲ್ಲ ಸೇರಿಕೊಂಡು ಈ ರೀತಿ ಸುಳ್ಳು ಹೇಳಿದ್ದು ಅನ್ಯಾಯ ಎಂಬ ತೀರ್ಮಾನಕ್ಕೆ ಬಂದರು. ಮಾತ್ರವಲ್ಲ ಮದುವೆಗೆ ಖರ್ಚು ಮಾಡಿದ 5.66 ಲಕ್ಷ ರೂ.ಯನ್ನು ಮರಳಿ ಕೊಡಬೇಕು ಎಂದು ತಾಕೀತು ಮಾಡಿದರು. ಹುಡುಗನ ಕಡೆಯವರು ವಿಧಿ ಇಲ್ಲದೆ ಹಣ ಹಿಂದಿರುಗಿಸುವುದಾಗಿ ಹೇಳಿದರು. ಮದುವೆಯ ದೊಡ್ ಕನಸಿನೊಂದಿಗೆ ಉನ್ನಾವೋಗೆ ಬಂದಿದ್ದ ಹುಡುಗ ಮತ್ತು ದಿಬ್ಬಣ ಹುಡುಗಿಯೇ ಇಲ್ಲದೇ ಕಾನ್ಪುರಕ್ಕೆ ಬೇಸರದಿಂದ ಮರಳಿತು.
ಇದನ್ನೂ ಓದಿ| Viral News: ಆಕೆ 36 ವರ್ಷ ಪುರುಷ ವೇಷದಲ್ಲಿ ಬದುಕಿದರು, ಎಲ್ಲವೂ ಮಗಳಿಗಾಗಿ!