ತಿರುವನಂತಪುರಂ: ಬ್ಯಾಚುಲರ್ ಲೈಫ್ನಲ್ಲಿ ಸ್ನೇಹಿತರೊಂದಿಗೆ ಆರಾಮಾಗಿ ಕಾಲ ಕಳೆಯುವ ಅವಕಾಶ ಮದುವೆಯಾದ ಮೇಲೆ ತಪ್ಪುತ್ತದೆ. ವಿವಾಹವಾಗಿ ಸಂಗಾತಿ ಬಂದ ಮೇಲೆ ಅವರಿಗೆ ಸಮಯ ಕೊಡಬೇಕಾಗುತ್ತದೆ. ಗೆಳೆಯರನ್ನು ಭೇಟಿಯಾಗಲು ಸಾಧ್ಯವಾದರೂ, ಅವರೊಂದಿಗೆ ಟ್ರಿಪ್ ಹೋಗಲಾಗಲೀ, ಬಿಂದಾಸ್ ಆಗಿ ತುಂಬ ಹೊತ್ತು ಪಾರ್ಟಿ ಮಾಡಲಾಗಲೀ ಸಾಧ್ಯವಾಗುವುದಿಲ್ಲ ಎಂಬುದು ಅನೇಕಾನೇಕರ ಅನುಭವ. ಅದರಲ್ಲೂ ಈ ಅನುಭವ ಪಡೆಯುವವರು ಹೆಚ್ಚಾಗಿ ಪುರುಷರು. ಸ್ನೇಹಿತರೋ/ ಪತ್ನಿಯೋ ಎಂಬ ಸಂದಿಗ್ಧಕ್ಕೆ ಬೀಳುವವರು ಇವರೇ..
ಆದರೆ ಕೇರಳದಲ್ಲೊಬ್ಬಳು ಯುವತಿ ತನ್ನ ಪತಿ, ಆತನ ಸ್ನೇಹಿತರೊಂದಿಗೆ ಕಾಲಕಳೆಯಲು ಫುಲ್ ಟೈಮ್ ಕೊಟ್ಟಿದ್ದಾಳೆ. ಅದೆಷ್ಟರಮಟ್ಟಿಗೆ ಎಂದರೆ, ಆಕೆ ಒಪ್ಪಂದಕ್ಕೆ ಸಹಿಯನ್ನೂ ಹಾಕಿಕೊಟ್ಟಿದ್ದಾಳೆ. ಹೀಗೆ 50 ರೂ.ನ ಸ್ಟಾಂಪ್ ಪೇಪರ್ನಲ್ಲಿ, ಒಪ್ಪಂದಕ್ಕೆ ಸಹಿ ಹಾಕಿದ ಮಹಿಳೆ ಹೆಸರು ಎಸ್.ಅರ್ಚನಾ. ‘ಮದುವೆಯಾದ ಮೇಲೆಯೂ ನನ್ನ ಪತಿ ರಘು ಎಸ್.ಕೆಡಿಆರ್ ಅವರು ರಾತ್ರಿ 9ಗಂಟೆಯವರೆಗೆ ಅವರ ಸ್ನೇಹಿತರ ಜತೆಯೇ ಕಾಲ ಕಳೆಯಬಹುದು. ಆ ಸಮಯದಲ್ಲಿ ನಾನು ಅವರಿಗೆ ಫೋನ್ ಮಾಡಿ, ತೊಂದರೆ ಕೊಡುವುದಿಲ್ಲ’ ಎಂಬುದು ಒಪ್ಪಂದದ ಸಾರಾಂಶ. ಇದಕ್ಕೆ ಆಕೆ ಸಂಪೂರ್ಣವಾಗಿ ಒಪ್ಪಿ ಸಹಿ ಮಾಡಿದ್ದಲ್ಲದೆ, ನನ್ನ ಮಾತಿಗೆ ಬದ್ಧಳಾಗಿರುತ್ತೇನೆ ಎಂದೂ ಹೇಳಿದ್ದಾರೆ. ಅಂದಹಾಗೇ, ಆಕೆ ಸ್ಟಾಂಪ್ ಪೇಪರ್ ಮೇಲೆ ಸಹಿ ಮಾಡಿದ್ದು ನವೆಂಬರ್ 5ರಂದು.
ಅರ್ಚನಾ ಮತ್ತು ರಘು ನವೆಂಬರ್ 5ರಂದು ಪಲಕ್ಕಾಡ್ನ ಕಂಜಿಕೋಡ್ನಲ್ಲಿ ವಿವಾಹವಾಗಿದ್ದಾರೆ. ಅದೇ ದಿನ ರಘುವಿನ ಸ್ನೇಹಿತರೆಲ್ಲ ಸೇರಿ ಈ ಒಪ್ಪಂದದ ಪೇಪರ್ ರೆಡಿ ಮಾಡಿ, ಅರ್ಚನಾಗೆ ಉಡುಗೊರೆ ರೂಪದಲ್ಲಿ ಕೊಟ್ಟಿದ್ದಾರೆ. ಅದನ್ನು ತೆರೆದು ಓದಿದ ವಧು, ಖುಷಿಯಿಂದಲೇ ಸಹಿ ಮಾಡಿಕೊಟ್ಟಿದ್ದಾರೆ. ಆ ಸ್ಟಾಂಪ್ ಪೇಪರ್ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ರಘು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಅರ್ಚನಾ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ರಘುಗೆ ಸ್ನೇಹಿತರು ತುಂಬ ಜನ ಇದ್ದಾರೆ. ಅವರೆಲ್ಲ ಸೇರಿ ಹೀಗೊಂದು ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ. ಅಂದಹಾಗೇ, ಇದು ಫನ್ನೋ-ಸೀರಿಯಸ್ಸೋ ಗೊತ್ತಾಗಿಲ್ಲ.
ಇದನ್ನೂ ಓದಿ: Viral News | ಗೋಡಂಬಿ ಉದ್ಯಾನದಲ್ಲಿ ಮದ್ಯ ಕುಡಿದ 24 ಆನೆಗಳು ಮಾಡಿದ್ದೇನು? ಸ್ಥಳೀಯರು ಡ್ರಮ್ ಬಡಿಯಬೇಕಾಯ್ತು !