Site icon Vistara News

BRO Airfield: ಲಡಾಕ್‌ ಗಡಿಯಲ್ಲಿ ವಾಯುನೆಲೆ ನಿರ್ಮಾಣ; ಕುತಂತ್ರಿ ಚೀನಾಗೆ ಭಾರತ ಪಾಟಿಸವಾಲು

Rajanath Singh On Airfield

BRO To Construct Airfield At Strategic Ladakh Landing Strip; Counter For China

ಲಡಾಕ್:‌ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ ಪೂರ್ವ ಲಡಾಕ್‌ನಲ್ಲಿ ಉಪಟಳ ಮಾಡುವ ಚೀನಾಗೆ (India China Faceoff) ತಕ್ಕ ಪ್ರತ್ಯುತ್ತರ ನೀಡುವ ದಿಸೆಯಲ್ಲಿ ಭಾರತ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಪೂರ್ವ ಲಡಾಕ್‌ ಗಡಿಯಲ್ಲಿ ಸುಧಾರಿತ ವಾಯುನೆಲೆಯನ್ನು (BRO Airfield) ಸ್ಥಾಪಿಸಲು ಗಡಿ ರಸ್ತೆ ಸಂಸ್ಥೆ (Border Roads Organisation-BRO) ತೀರ್ಮಾನಿಸಿದೆ. ಇದು ಚೀನಾಗೆ ಯಾವುದೇ ಕ್ಷಣದಲ್ಲಾದರೂ ಪ್ರತಿಕ್ರಿಯೆ ನೀಡಲು ಅನುಕೂಲ ಎಂದೇ ಹೇಳಲಾಗುತ್ತಿದೆ.

ಪೂರ್ವ ಲಡಾಕ್‌ನ ನ್ಯೋಮಾ ಬೆಲ್ಟ್‌ನಲ್ಲಿ 218 ಕೋಟಿ ರೂಪಾಯಿ ವೆಚ್ಚದಲ್ಲಿ ಸುಧಾರಿತ ವಾಯುನೆಲೆ ಸ್ಥಾಪಿಸಲಾಗುತ್ತದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸೆಪ್ಟೆಂಬರ್‌ 12ರಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಾಯುನೆಲೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನ್ಯೋಮಾ ಅಡ್ವಾನ್ಸ್ಡ್‌ ಲ್ಯಾಂಡಿಂಗ್‌ ಗ್ರೌಂಡ್‌ನಲ್ಲಿ ವಾಯುನೆಲೆ ನಿರ್ಮಿಸಲಾಗುತ್ತದೆ.

ವಾಯುನೆಲೆ ನಿರ್ಮಾಣ ಏಕೆ ಪ್ರಮುಖ?

ಆಕ್ರಮಣಕಾರಿ ನೀತಿ ಅನುಸರಿಸಿದರೆ ಚೀನಾಗೆ ತಕ್ಕ ಪ್ರತ್ಯುತ್ತರ ನೀಡಲು ನ್ಯೋಮಾ ವಾಯುನೆಲೆಯು ಪ್ರಮುಖ ಎನಿಸಲಿದೆ. ಸೇನೆಯ ಹೆಲಿಕಾಪ್ಟರ್‌ಗಳು ಹಾಗೂ ಯುದ್ಧವಿಮಾನಗಳು ಲ್ಯಾಂಡ್‌ ಆಗಲು ವಾಯುನೆಲೆ ಸಹಕಾರಿಯಾಗಲಿದೆ. ಹಾಗೆಯೇ, ತುರ್ತು ಸಂದರ್ಭಗಳಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಸೈನಿಕರನ್ನು ನಿಯೋಜಿಸಲು ಕೂಡ ವಾಯುನೆಲೆಯು ಪ್ರಮುಖ ಪಾತ್ರ ನಿರ್ವಹಿಸಲಿದೆ. ಇದೇ ಕಾರಣಕ್ಕಾಗಿ ವಾಯುನೆಲೆಯನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: India China Border: ಅಕ್ಸಾಯ್ ಚಿನ್‌ನಲ್ಲಿ ಚೀನಾ ಭೂಗತ ಬಂಕರ್‌; ಉಪಗ್ರಹ ಚಿತ್ರದಿಂದ ಬಹಿರಂಗ

ಚೀನಾದ ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ (LAC) 46 ಕಿಲೋಮೀಟರ್‌ ದೂರದಲ್ಲಿ ವಾಯುನೆಲೆ ನಿರ್ಮಿಸಲಾಗುತ್ತಿದೆ. ರಾಜನಾಥ್‌ ಸಿಂಗ್‌ ಅವರು ವಾಯುನೆಲೆಯ ಜತೆಗೆ 2,941 ಕೋಟಿ ರೂ. ಮೌಲ್ಯದ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 2020ರ ಮೇ ತಿಂಗಳಿಂದಲೂ ಗಡಿಯಲ್ಲಿ ಚೀನಾ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ ಉದ್ಧಟತನ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿದೆ.

Exit mobile version