Site icon Vistara News

K Kavitha: ದೆಹಲಿ ಅಬಕಾರಿ ನೀತಿ ಹಗರಣ; ಬಿಆರ್‌ಎಸ್‌ ನಾಯಕಿ ಕೆ ಕವಿತಾ ಬಂಧನ

K Kavitha

Delhi court sends BRS leader K Kavitha to judicial custody till April 23 in excise policy case

ಹೈದರಾಬಾದ್:‌ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ (Delhi Liquor Policy Case) ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ (BRS) ನಾಯಕಿ, ವಿಧಾನ ಪರಿಷತ್‌ ಸದಸ್ಯೆ (MLC) ಕೆ. ಕವಿತಾ (K Kavitha) ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್‌ನಲ್ಲಿರುವ (Hyderabad) ಕೆ. ಕವಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿ, ಸುಮಾರು ನಾಲ್ಕು ತಾಸು ಪರಿಶೀಲನೆ ನಡೆಸಿದ ಇ.ಡಿ ಅಧಿಕಾರಿಗಳು ಬಳಿಕ ಅವರನ್ನು ವಶಕ್ಕೆ ಪಡೆದಿದ್ದಾರೆ.

ಇ.ಡಿ ಹಾಗೂ ಸಿಬಿಐ ಅಧಿಕಾರಿಗಳು ಕೆ. ಕವಿತಾ ಅವರ ನಿವಾಸದಲ್ಲಿ ನಾಲ್ಗು ಗಂಟೆ ಪರಿಶೀಲನೆ ನಡೆಸಿದ್ದು, ಮಹತ್ವದ ದಾಖಲೆಗಳು ಲಭಿಸಿವೆ. ಇದೇ ಕಾರಣಕ್ಕಾಗಿ ಹೆಚ್ಚಿನ ವಿಚಾರಣೆ ನಡೆಸಲು ಕೆ. ಕವಿತಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ (ಮಾರ್ಚ್‌ 15) ರಾತ್ರಿಯೇ ವಿಮಾನದಲ್ಲಿ ಕೆ. ಕವಿತಾ ಅವರನ್ನು ದೆಹಲಿಗೆ ಕರೆತರಲಿದ್ದಾರೆ. ದೆಹಲಿಯಲ್ಲಿ ಸಿಬಿಐ ಹಾಗೂ ಇ.ಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪ ಕೇಳಿಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇ.ಡಿ ಹಾಗೂ ಸಿಬಿಐ ಅಧಿಕಾರಿಗಳು ಕೆ. ಕವಿತಾ ಅವರನ್ನು ವಿಚಾರಣೆ ನಡೆಸಿದೆ.

ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಅಕ್ರಮ: ಆಪ್​ ಸಂಸದ ರಾಘವ್​ ಚಡ್ಡಾಗೆ ಶುರುವಾಯ್ತು ಸಂಕಷ್ಟ

ಸೌತ್‌ ಗ್ರೂಪ್‌ ಎಂಬ ಕಂಪನಿಯನ್ನು ಕೆ. ಕವಿತಾ ಸೇರಿ ಹಲವರನ್ನು ಮುನ್ನಡೆಸುತ್ತಿದ್ದು, ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ಬಳಿಕ ಇದೇ ಕಂಪನಿಗೆ ಗುತ್ತಿಗೆ ಪಡೆಯಲು ಆಮ್‌ ಆದ್ಮಿ ಪಕ್ಷದ ನೇತೃತ್ವದ ಸರ್ಕಾರಕ್ಕೆ ಲಂಚ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕಾಗಿ ಇ.ಡಿ ಹಾಗೂ ಸಿಬಿಐ ಕೂಲಂಕಷ ತನಿಖೆ ನಡೆಸುತ್ತಿದೆ. ಇನ್ನು. ಕೆ. ಕವಿತಾ ಅವರನ್ನು ಬಂಧಿಸುತ್ತಲೇ, ಬಿಆರ್‌ಎಸ್‌ ನಾಯಕರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version