Site icon Vistara News

Lasya Nanditha: ಭೀಕರ ರಸ್ತೆ ಅಪಘಾತದಲ್ಲಿ ಶಾಸಕಿ ಲಾಸ್ಯ ನಂದಿತಾ ಸಾವು

MLA Lasya Nanditha

BRS MLA Lasya Nanditha, 37, killed in road accident in Hyderabad

ಹೈದರಾಬಾದ್:‌ ತೆಲಂಗಾಣದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತ್‌ ರಾಷ್ಟ್ರ ಸಮಿತಿ (Bharat Rashtra Samithi) ಶಾಸಕಿ ಲಾಸ್ಯ ನಂದಿತಾ (Lasya Nanditha) (37) ಅವರು ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಲಾಸ್ಯ ನಂದಿತಾ ಅವರು ಚಲಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಲಾಸ್ಯ ನಂದಿತಾ ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಹೈದರಾಬಾದ್‌ ಹೊರವಲಯದ ಸಂಗಾರೆಡ್ಡಿ ಜಿಲ್ಲೆಯ ಪಂತಚೇರು ಹೊರವರ್ತುಲ ರಸ್ತೆಯ ಬಳಿ ಅಪಘಾತ ಸಂಭವಿಸಿದೆ. ಲಾಸ್ಯ ನಂದಿತಾ ಅವರು ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿದ್ದು, ಡಿವೈಡರ್‌ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ವಾಹನ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. “ಮಾರುತಿ ಎಕ್ಸ್‌ಎಲ್‌6 ಕಾರು ವೇಗವಾಗಿ ಚಲಿಸುತ್ತಿತ್ತು. ಇದೇ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿದ್ದು, ಮೆಟಲ್‌ ಬ್ಯಾರಿಯರ್‌ಗೆ ಕಾರು ಡಿಕ್ಕಿಯಾಗಿದೆ” ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಾಸ್ಯ ನಂದಿತಾ ಅವರು ಸಿಕಂದರಾಬಾದ್‌ ಕಂಟೋನ್‌ಮೆಂಟ್‌ ಕ್ಷೇತ್ರದ ಶಾಸಕಿಯಾಗಿದ್ದು, ಕಳೆದ ವರ್ಷದ ನವೆಂಬರ್‌ನಲ್ಲಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಇವರು ಮಾಜಿ ಶಾಸಕ, ದಿವಂಗತ ಜಿ. ಸಾಯಣ್ಣ ಅವರ ಪುತ್ರಿಯಾಗಿದ್ದಾರೆ. 2023ರ ಫೆಬ್ರವರಿ 19ರಂದು ಲಾಸ್ಯ ನಂದಿತಾ ಅವರ ತಂದೆ ಮೃತಪಟ್ಟಿದ್ದರು. ಇದಾದ ಒಂದು ವರ್ಷದ ಬಳಿಕ ಲಾಸ್ಯ ನಂದಿತಾ ಮೃತಪಟ್ಟಿದ್ದಾರೆ. ಲಾಸ್ಯ ನಂದಿತಾ ಅವರ ನಿಧನದ ಹಿನ್ನೆಲೆಯಲ್ಲಿ ಬಿಆರ್‌ಎಸ್‌ ನಾಯಕರು, ಮುಖಂಡರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಟಿಕೆಟ್‌ ಸಿಗದ ಮಾಜಿ ಶಾಸಕ ವೆಂಕಟಸ್ವಾಮಿ ಹೃದಯಾಘಾತದಿಂದ ಸಾವು

10 ದಿನಗಳ ಹಿಂದೆಯೂ ಅಪಘಾತ ಸಂಭವಿಸಿತ್ತು

10 ದಿನಗಳ ಹಿಂದೆಯೂ ಲಾಸ್ಯ ನಂದಿತಾ ಅವರ ಕಾರು ಅಪಘಾತಕ್ಕೀಡಾಗಿತ್ತು. ಫೆಬ್ರವರಿ 13ರಂದು ಲಾಸ್ಯ ನಂದಿತಾ ಅವರು ಮುಖ್ಯಮಂತ್ರಿಯವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರಿನಲ್ಲಿ ನಲಗೊಂಡಕ್ಕೆ ತೆರಳುತ್ತಿದ್ದರು. ಮಾರ್ಗದ ಮಧ್ಯೆ ನರ್ಕತ್‌ಪಳ್ಳಿಯಲ್ಲಿ ಲಾಸ್ಯ ನಂದಿತಾ ಅವರಿದ್ದ ಕಾರು ಅಪಘಾತಕ್ಕೀಡಾಗಿತ್ತು. ಶಾಸಕಿಯ ಹೋಮ್‌ ಗಾರ್ಡ್‌ ಅಪಘಾತದಲ್ಲಿ ಮೃತಪಟ್ಟಿದ್ದರು. ಲಾಸ್ಯ ನಂದಿತಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಇದಾದ 10 ದಿನಗಳಲ್ಲಿಯೇ ಮತ್ತೊಂದು ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version