Site icon Vistara News

BSF: ಭಾರತ-ಪಾಕ್‌ ಗಡಿಯಲ್ಲಿ ಬರೋಬ್ಬರಿ 126 ಡ್ರೋನ್‌, 150 ಕೆಜಿ ಹೆರಾಯಿನ್‌ ವಶಪಡಿಸಿಕೊಂಡ ಬಿಎಸ್‌ಎಫ್‌

BSF

BSF

ನವದೆಹಲಿ: ಗಡಿ ಭದ್ರತಾ ಪಡೆ (BSF) ಈ ವರ್ಷದ ಮೊದಲ ಆರು ತಿಂಗಳಲ್ಲಿ ಬರೋಬ್ಬರಿ ಶಂಕಿತ 126 ಡ್ರೋನ್‌ (Drones) ಮತ್ತು 150 ಕೆಜಿ ಹೆರಾಯಿನ್‌ (Heroin) ವಶಪಡಿಸಿಕೊಂಡಿದೆ. ಈ ಮೂಲಕ ಹಿಂದಿನ ವರ್ಷದ ದಾಖಲೆಯನ್ನು ಮೀರಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಪಂಜಾಬ್‌ನ 553 ಕಿ.ಮೀ. ಉದ್ದದ ಕಠಿಣ ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಎಸ್ಎಫ್ ಹದ್ದನ ಕಣ್ಣು ನೆಟ್ಟಿದ್ದು, ಇಲ್ಲಿಂದಲೇ ಸಂಶಯಾಸ್ಪದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.

2023ರಲ್ಲಿ ಪಂಜಾಬ್‌ನಲ್ಲಿ ಬಿಎಸ್ಎಫ್ ಪಾಕಿಸ್ತಾನದಿಂದ ಬರುತ್ತಿದ್ದ 107 ಡ್ರೋನ್‌ಗಳು ಅಥವಾ ಯುಎವಿಗಳನ್ನು ವಶಪಡಿಸಿಕೊಂಡಿತ್ತು. ಆದಾಗ್ಯೂ ಈ ವರ್ಷದ ಕೇವಲ ಆರು ತಿಂಗಳ ಅವಧಿಯಲ್ಲಿ ಗಡಿ ಭದ್ರತಾ ಪಡೆಯ ಸಿಬ್ಬಂದಿ 126 ಡ್ರೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಗಡಿಯಾಚೆಗಿನ ಬೆದರಿಕೆಗಳನ್ನು ಗುರುತಿಸುವಲ್ಲಿ ಮತ್ತು ಅವನ್ನು ತಟಸ್ಥಗೊಳಿಸುವಲ್ಲಿ ಬಿಎಸ್ಎಫ್ ಪಡೆಗಳ ವರ್ಧಿತ ಸಾಮರ್ಥ್ಯವನ್ನು ಇದು ಎತ್ತಿ ತೋರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆರಾಯಿನ್‌, ಆಯುಧವೂ ವಶ

126 ಡ್ರೋನ್‌ಗಳ ಜತೆಗೆ ಬಿಎಸ್‌ಎಫ್‌ 150 ಕೆಜಿ ಹೆರಾಯಿನ್‌ ಮತ್ತು 18 ಆಯುಧಗಳನ್ನೂ ವಶಕ್ಕೆ ತೆಗೆದುಕೊಂಡಿದೆ. ಇದಲ್ಲದೆ ಅರೆಸೈನಿಕ ಪಡೆ ಅಂತಾರಾಷ್ಟ್ರೀಯ ಗಡಿಯನ್ನು ದಾಟಲು ಪ್ರಯತ್ನಿಸುತ್ತಿದ್ದ 21 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದೆ.

ʼʼಈ ಅಂಕಿ ಅಂಶಗಳು ಗಡಿ ಭದ್ರತಾ ಪಡೆಗಳ ಕಾರ್ಯ ವೈಖರಿ ಮತ್ತು ಕಠಿಣ ಶ್ರಮವನ್ನು ತೋರಿಸುತ್ತದೆ. ಹವಾಮಾನ ವೈಪರೀತ್ಯ, ಕಳ್ಳ ಸಾಗಣೆದಾರರ ಉಪಟಳದ ನಡುವೆಯೂ ಬಿಎಸ್‌ಎಫ್‌ ಸಿಬ್ಬಂದಿ ದೇಶವನ್ನು ಕಾಯಲು ಬದ್ಧವಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾ ನಿರ್ಮಿತ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್‌

ಈ ವರ್ಷದ ಮೇ ತಿಂಗಳಲ್ಲಿ ಬಿಎಸ್‌ಎಫ್‌ ಸಿಬ್ಬಂದಿ ಪಂಜಾಬ್‌ನ ಅಮೃತಸರ್‌ದಲ್ಲಿ ಡ್ರೋನ್‌ನಲ್ಲಿ ಸಾಗಿಸುತ್ತಿದ್ದ ಹೆರಾಯಿನ್‌ ವಶಪಡಿಸಿಕೊಂಡಿದ್ದರು. ಭಾರತ-ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ ಸಮೀಪ ಈ ಘಟನೆ ನಡೆದಿತ್ತು. ಬಳಿಕ ಈ ಡ್ರೋನ್‌ ಚೀನಾ ನಿರ್ಮಿತ ಎನ್ನುವುದು ಪತ್ತೆಯಾಗಿತ್ತು. ಡ್ರೋನ್‌ನಲ್ಲಿ ಪತ್ತೆಯಾದ ಹೆರಾಯಿನ್‌ ಸುಮಾರು 500 ಗ್ರಾಂ ಇತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಇದನ್ನು ಓದಿ: ಪಾಕಿಸ್ತಾನದ ಮತ್ತೊಂದು ಡ್ರೋನ್​​​ಗೆ ಬಿಎಸ್​​ಎಫ್​ ಗುಂಡೇಟು; ಇಂದು ಬೆಳಗ್ಗೆ ಪತ್ತೆಯಾಯ್ತು ಅವಶೇಷ

ಮಾದಕವಸ್ತುಗಳನ್ನು ಟೇಪ್‌ನಿಂದ ಸುತ್ತಲಾಗಿತ್ತು. ವಶಪಡಿಸಿಕೊಂಡ ಡ್ರೋನ್ ಅನ್ನು ಚೀನಾ ನಿರ್ಮಿತ ಡಿಜೆಐ ಮಾವಿಕ್ 3 ಕ್ಲಾಸಿಕ್ ಎಂದು ಗುರುತಿಸಲಾಗಿತ್ತು. ಜತೆಗೆ ತಾರ್ನ್ ತರಣ್ ಜಿಲ್ಲೆಯ ಸಂಕಟತಾರಾ ಗ್ರಾಮದ ಕೃಷಿ ಭೂಮಿಯಲ್ಲಿ ಸುಮಾರು 2.175 ಕೆಜಿ ತೂಕದ ಶಂಕಿತ ಹೆರಾಯಿನ್ ಪ್ಯಾಕೆಟ್ ಕಂಡು ಬಂದಿತ್ತು. ಮಾತ್ರವಲ್ಲ ತಾರ್ನ್ ತರಣ್ ಜಿಲ್ಲೆಯ ಟಿಜೆ ಸಿಂಗ್ ಗ್ರಾಮದ ಪಕ್ಕದ ಕೊಯ್ಲು ಮಾಡಿದ ಹೊಲದಿಂದ 569 ಗ್ರಾಂ ತೂಕದ ಮತ್ತೊಂದು ಪ್ಯಾಕೆಟ್ ಶಂಕಿತ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಸದ್ಯ ಈ 6 ತಿಂಗಳಲ್ಲಿಯೇ ಗಡಿ ಭದ್ರತಾ ಪಡೆ ಇಷ್ಟೊಂದು ಪ್ರಮಾಣದ ಶಂಕಿತ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಕಾವಲನ್ನು ಇನ್ನಷ್ಟು ಬಿಗಿಗೊಳಿಸಿದೆ. ಈ ಮೂಲಕ ಒಳನುಸುಳುವಿಕೆಯನ್ನು ಮಟ್ಟ ಹಾಕಲು ಪಣ ತೊಟ್ಟಿದೆ.

Exit mobile version