ಪಂಜಾಬ್ನ ಅಮೃತ್ಸರ್ಗೆ ಪ್ರವೇಶ ಮಾಡಿದ್ದ ಪಾಕಿಸ್ತಾನದ ಡ್ರೋನ್ನ್ನು ಅಲ್ಲಿನ ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಮಂಗಳವಾರ ಸಂಜೆ 7.20ರ ಹೊತ್ತಿಗೆ ಪಾಕಿಸ್ತಾನಿ ಡ್ರೋನ್ವೊಂದು ಅಮೃತ್ಸರ್ದ ಡಾಕ್ ಬಾರ್ಡರ್ ಔಟ್ಪೋಸ್ಟ್ ಬಳಿ ಹಾರಾಡುತ್ತಿತ್ತು. ಬಿಎಸ್ಎಫ್ ಸಿಬ್ಬಂದಿ ಅದಕ್ಕೆ ಗುಂಡು ಹಾರಿಸಿದ್ದರು. ಆ ಡ್ರೋನ್ ಕೆಳಗೆ ಬಿದ್ದಿತ್ತು. ಆದರೆ ಅದು ಎಲ್ಲಿ ಬಿದ್ದಿದೆ ಎಂದು ಗೊತ್ತಾಗಿರಲಿಲ್ಲ. ಇಂದು ಬೆಳಗ್ಗೆ ಆ ಡ್ರೋನ್ನ ಅವಶೇಷಗಳು ಭಾರೋಪೋಲ್ನಲ್ಲಿರುವ ಗಡಿ ಔಟ್ಪೋಸ್ಟ್ಗಿಂತ 20 ಮೀಟರ್ ದೂರದಲ್ಲಿ, ಪಾಕಿಸ್ತಾನ ಭೂಭಾಗದಲ್ಲಿ ಬಿದ್ದಿರುವುದು ಕಾಣಿಸಿದೆ.
ಮಂಗಳವಾರ ಸಂಜೆ ಹೊತ್ತಿಗೆ ಡ್ರೋನ್ ಹಾರಾಟದ ಶಬ್ದ ಕೇಳುತ್ತಿದ್ದಂತೆ ಗಡಿ ಭದ್ರತಾ ಪಡೆ ಸಿಬ್ಬಂದಿ ಅಲರ್ಟ್ ಆಗಿದ್ದರು. ಭಾರತ ಭೂಭಾಗ ಪ್ರವೇಶಿಸಿ ಕೆಲ ನಿಮಿಷ ಹಾರಾಟವನ್ನೂ ನಡೆಸಿತ್ತು. ಅಷ್ಟರಲ್ಲಿ ಅದರತ್ತ ಬಿಎಸ್ಎಫ್ ಫೈರಿಂಗ್ ಮಾಡಿದ್ದರು. ಡ್ರೋನ್ನ್ನು ಹೊಡೆದುರುಳಿಸಲಾಗಿದ್ದರೂ, ಅದು ಯಾವ ಕಾರಣಕ್ಕೆ ಇಲ್ಲಿಗೆ ಬಂದಿತ್ತು? ಅದರಲ್ಲಿ ಏನಾದರೂ ಅನುಮಾನಾಸ್ಪದ ವಸ್ತುಗಳು ಇದ್ದವಾ? ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
2021ನೇ ವರ್ಷಕ್ಕೆ ಹೋಲಿಸಿದರೆ, ಪಾಕಿಸ್ತಾನಿ ಡ್ರೋನ್ಗಳು ಭಾರತದ ಭೂಪ್ರದೇಶ ಪ್ರವೇಶ ಮಾಡುವ ಪ್ರಮಾಣ ಈ ವರ್ಷ ಹೆಚ್ಚಾಗಿದೆ. ಪ್ರಸಕ್ತ ವರ್ಷದಲ್ಲಿ 230 ಡ್ರೋನ್ಗಳು ಪಾಕ್ನಿಂದ ಭಾರತ ಭೂಬಾಗ ಪ್ರವೇಶಿಸಿವೆ. 2021ರಲ್ಲಿ ಈ ಸಂಖ್ಯೆ 104 ಆಗಿತ್ತು. 2020ರಲ್ಲಿ 77 ಡ್ರೋನ್ಗಳು ಪಾಕ್ನಿಂದ ಭಾರತದ ಭಾಗಕ್ಕೆ ಬಂದಿದ್ದವು. ಭಾರತದಲ್ಲಿರುವ ಉಗ್ರರಿಗೆ ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐನಿಂದ ಡ್ರೋನ್ ಮೂಲಕ ಶಸ್ತ್ರಗಳನ್ನು ಮತ್ತು ಮಾದಕ ವಸ್ತುಗಳನ್ನು ಕಳಿಸುತ್ತಿದೆ. ಗುಜರಾತ್, ಜಮ್ಮು, ಪಂಜಾಬ್ ಮತ್ತು ರಾಜಸ್ಥಾನ ಗಡಿಗಳಲ್ಲಿ ಈ ಡ್ರೋನ್ ಪದೇಪದೆ ಹಾರಾಡುತ್ತಿದ್ದು, ಬಹುತೇಕ ಸಲ ನಮ್ಮ ಬಿಎಸ್ಎಫ್ ಸಿಬ್ಬಂದಿ ಅದನ್ನು ಯಶಸ್ವಿಯಾಗಿ ಹೊಡೆದುರುಳಿಸುತ್ತಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer | ಪಾಕಿಸ್ತಾನದ ಡ್ರೋನ್ ಉರುಳಿಸಲಿದೆ ಭಾರತೀಯ ಸೇನೆಯ ಗಿಡುಗ, ಹೇಗಿದರ ಆಪರೇಷನ್?