ನವ ದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮುರನ್ನು ಬೆಂಬಲಿಸಿ, ಮತ ಹಾಕಿದ್ದ ಉತ್ತರ ಪ್ರದೇಶ ಬಹುಜನ ಸಮಾಜ ಪಾರ್ಟಿ (ಮಾಯಾವತಿ ಪಕ್ಷ) ಇದೀಗ ಉಪರಾಷ್ಟ್ರಪತಿ ಚುನಾವಣೆಯಲ್ಲೂ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯನ್ನೇ ಬೆಂಬಲಿಸುವುದಾಗಿ ಘೋಷಿಸಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಜಗದೀಪ್ ಧನಕರ್ ಅವರನ್ನು ಬೆಂಬಲಿಸುತ್ತೇವೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿದ ಅವರು, ‘ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಸಾಮರಸ್ಯ ಇಲ್ಲದ ಕಾರಣ ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಗೆ ಅವಿರೋಧ ಆಯ್ಕೆ ಆಗಲೇ ಇಲ್ಲ. ಚುನಾವಣೆ ನಡೆಯಿತು. ಉಪರಾಷ್ಟ್ರಪತಿ ಆಯ್ಕೆಯಲ್ಲೂ ಹೀಗೇ ಆಗುತ್ತಿದೆ. ಒಮ್ಮತ ಇಲ್ಲದ ಕಾರಣ ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ವಿರುದ್ಧ ಪ್ರತಿಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ. ಆಗಸ್ಟ್ 6ರಂದು ಚುನಾವಣೆ ನಡೆಯಲಿದೆ. ಈ ದೇಶದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಎನ್ಡಿಎಯ ಜಗದೀಪ್ ಧನಕರ್ಗೆ ಮತದಾನ ಮಾಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದ್ದಾರೆ.
ಇದೀಗ ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ವಿರುದ್ಧ ಒಂದಾಗಿರುವ ಪ್ರತಿಪಕ್ಷಗಳ ವಿರುದ್ಧವೇ ಮಾಯಾವತಿಗೆ ಅಸಮಾಧಾನ ಇದೆ. ಎಲ್ಲ ಪ್ರತಿಪಕ್ಷಗಳೂ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮುರನ್ನು ಆಯ್ಕೆ ಮಾಡುವಾಗ ಮಾಯಾವತಿ, ‘ನಾವು ಎನ್‌ಡಿಎ ಒಕ್ಕೂಟಕ್ಕಾಗಲೀ, ಬಿಜೆಪಿಗಾಗಲೀ ಬೆಂಬಲ ಸೂಚಿಸುತ್ತಿಲ್ಲ. ಆದರೆ ಅವರ ಅಭ್ಯರ್ಥಿಗಷ್ಟೇ ಮತ ಹಾಕುತ್ತೇವೆ’ ಎಂದು ಹೇಳಿದ್ದರು.
ಇದನ್ನೂ ಓದಿ: ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಮಾಯಾವತಿ ಬೆಂಬಲ ಘೋಷಣೆ