Site icon Vistara News

BSP President: ತಮಿಳುನಾಡಿನಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಹತ್ಯೆ; ರಾಜಕೀಯ ವೈಷಮ್ಯ ಕಾರಣ?

BSP President

Tamil Nadu BSP Leader Armstrong Murder: Accused Thiruvengadam Shot Dead in Police Encounter Chennai

ಚೆನ್ನೈ: ರಾಜಕೀಯ ಹತ್ಯೆ, ಹಿಂಸಾಚಾರ, ಬೇರೆ ರಾಜಕೀಯ ಪಕ್ಷದ ನಾಯಕರ ಮೇಲೆ ಹಲ್ಲೆಗಳು ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಲೇ ಇರುತ್ತವೆ. ಈಗ ಇಂತಹ ರಾಜಕೀಯ ದ್ವೇಷದ ಹತ್ಯೆಗಳು ತಮಿಳುನಾಡಿಗೂ ಕಾಲಿಟ್ಟಿವೆ. ಇದಕ್ಕೆ ನಿದರ್ಶನ ಎಂಬಂತೆ, ಬಹುಜನ ಸಮಾಜ ಪಕ್ಷದ (BSP President) ತಮಿಳುನಾಡು ಘಟಕದ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್‌ (Armstrong) ಅವರನ್ನು ಹತ್ಯೆ ಮಾಡಲಾಗಿದೆ. ಚೆನ್ನೈನಲ್ಲಿರುವ (Chennai) ಅವರ ನಿವಾಸದ ಬಳಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.

ಚೆನ್ನೈನ ಪೆರಂಬೂರ್‌ನಲ್ಲಿರುವ ಸದಯಪ್ಪನ್‌ ಸ್ಟ್ರೀಟ್‌ನಲ್ಲಿರುವ ಅವರ ನಿವಾಸದ ಬಳಿ ಶುಕ್ರವಾರ (ಜುಲೈ 5) ಸಂಜೆ 7.30ರ ವೇಳೆಗೆ ಸುಮಾರು 6 ಜನರ ಗ್ಯಾಂಗ್‌ ದಾಳಿ ಮಾಡಿದೆ. ಮಾರಕಾಸ್ತ್ರಗಳ ಸಮೇತ ಆಗಮಿಸಿದ ಅವರು ದಾಳಿ ನಡೆಸಿ, ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆರ್ಮ್‌ಸ್ಟ್ರಾಂಗ್‌ ಅವರನ್ನು ನಗರದಲ್ಲಿರುವ ಥೌಸಂಡ್‌ ಲ್ಯಾಂಪ್ಸ್‌ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ತಮಿಳುನಾಡು ಬಿಎಸ್‌ಪಿ ಘಟಕದ ಅಧ್ಯಕ್ಷರಾಗಿದ್ದ ಆರ್ಮ್‌ಸ್ಟ್ರಾಂಗ್‌ ಅವರು ಇದಕ್ಕೂ ಮೊದಲು ಗ್ರೇಟರ್‌ ಚೆನ್ನೈ ಕಾರ್ಪೊರೇಷನ್‌ನ ಕೌನ್ಸಿಲರ್‌ ಆಗಿದ್ದರು. ಚುನಾವಣಾ ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಳ್ಳದ ಆರ್ಮ್‌ಸ್ಟ್ರಾಂಗ್‌ ಅವರು ರಾಜ್ಯದಲ್ಲಿ ದಲಿತರ ಪರ ಚಿಂತಕ, ಅಂಬೇಡ್ಕರ್‌ವಾದಿ ಎಂಬುದಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದರು. ಹಾಗಾಗಿ, ಆರ್ಮ್‌ಸ್ಟ್ರಾಂಗ್‌ ಅವರು ರಾಜಕೀಯದಲ್ಲಿ ಹೆಚ್ಚಿನ ಶತ್ರುಗಳನ್ನು ಹೊಂದಿರಲಿಲ್ಲ. ಇಷ್ಟಾದರೂ ಅವರ ಮೇಲೆ ಹಲ್ಲೆ ನಡೆಸಿ, ಹತ್ಯೆಗೈಯಲಾಗಿದೆ.

ಆರ್ಮ್‌ಸ್ಟ್ರಾಂಗ್‌ ಜತೆಗೆ ಇನ್ನಿಬ್ಬರ ಮೇಲೆಯೂ ಹಲ್ಲೆ ನಡೆದಿದ್ದು, ಅವರು ಗಾಯಗೊಂಡಿದ್ದಾರೆ. ದಾಳಿ ಮಾಡಿದ ಆರು ಮಂದಿಯ ಕುರಿತು ಇದುವರೆಗೆ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯೂ, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: NEET Aspirant: ನೀಟ್‌ ಅಕ್ರಮ ಬಯಲಾದ ಬೆನ್ನಲ್ಲೇ 17 ವರ್ಷದ NEET ಅಭ್ಯರ್ಥಿ ಆತ್ಮಹತ್ಯೆ; ಸಾವಿಗೆ ಯಾರು ಹೊಣೆ?

Exit mobile version