ಕೇಂದ್ರ ಸರ್ಕಾರ 2023-24ನೇ ಸಾಲಿನ ಕೇಂದ್ರ ಬಜೆಟ್ (Budget 2023 )ಬಜೆಟ್ ಮಂಡನೆ ಇಂದು ಬೆಳಗ್ಗೆ 11 ಗಂಟೆಯಿಂದ ನಡೆಯುತ್ತಿದ್ದು, ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನಾ ಭಾಷಣ ಪ್ರಾರಂಭಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಇದು ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಆಗಿರುವುದರಿಂದ ಭಾರಿ ಕುತೂಹಲ ಮೂಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕಿದು 11ನೇ ಬಜೆಟ್ ಆಗಿದೆ. ಜನಸಾಮಾನ್ಯರ ನಿರೀಕ್ಷೆಗಳು ಹಲವು ಇವೆ. ಪ್ರಸ್ತುತ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಿಸುವ ಅಂಶಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ..
ಭಾರತದ ಅಭಿವೃದ್ಧಿಗೆ ಗಟ್ಟಿ ಬುನಾದಿ ಈ ಬಜೆಟ್
ಅಮೃತ ಕಾಲದ ಈ ಮೊದಲ ಬಜೆಟ್ ಭಾರತದ ಅಭಿವೃದ್ಧಿಗೆ ಗಟ್ಟಿಯಾದ ಅಡಿಪಾಯ ಆಗಲಿದೆ. ಬಡಜನರೂ ಸೇರಿ, ಎಲ್ಲ ವರ್ಗದ ಫಲಾನುಭವಿಗಳ ಕನಸನ್ನೂ ನನಸು ಮಾಡುವಂಥ ಬಜೆಟ್ ಇದಾಗಿದೆ. ಮಧ್ಯಮ ವರ್ಗದ ಜನರು, ಕೃಷಿಕರಿಗೂ ಒಳಿತು ಮಾಡುವ ಬಜೆಟ್ ಇದು ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ಲೇಷಿಸಿದರು.
ಮಹಿಳೆಯರ ಸಬಲೀಕರಣಕ್ಕೆ ಸದಾ ಸಿದ್ಧ
ಈ ದೇಶಕ್ಕಾಗಿ ಪರಂಪರಾಗತವಾಗಿ ದುಡಿಯುತ್ತಿರುವ ವಿಶ್ವಕರ್ಮ ಸಮಾಜದವರಿಗಾಗಿ ಇದೇ ಮೊದಲ ಬಾರಿಗೆ ತರಬೇತಿ ಮತ್ತು ನೆರವನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಹಿಳಾ ಸ್ವಸಹಾಯ ಸಂಘಗಳು ಸ್ತ್ರೀಯರ ಆರ್ಥಿಕತೆಯನ್ನು ಬಲಪಡಿಸಿವೆ. ಹಾಗೇ, ಈ ಬಜೆಟ್ನಲ್ಲಿ ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆಯನ್ನು ಘೋಷಿಸಿದ್ದು, ಅವರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಧಾನಿ ಮೋದಿ ಭಾಷಣ
ಕೇಂದ್ರ ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿ, ಇದೊಂದು ಐತಿಹಾಸಿಕ ಬಜೆಟ್ ಆಗಿದೆ. ಎಲ್ಲ ವರ್ಗದವರಿಗೂ ಪೂರಕವಾಗಿದೆ ಎಂದು ಹೇಳಿದರು.
ಕೇಂದ್ರ ಬಜೆಟ್ ಮಂಡನೆ ಬೆನ್ನಲ್ಲೇ ಸೆನ್ಸೆಕ್ಸ್ 1100 ಅಂಕಗಳು ಏರಿಕೆ
ಡಿಜಿಟಲ್ ಕ್ಷೇತ್ರಕ್ಕೆ
1. ಡಿಜಿಲಾಕರ್ಗಳ ಸೇವಾ ವ್ಯಾಪ್ತಿ ವಿಸ್ತರಣೆ
2. 5 ಜಿ ನೆಟ್ವರ್ಕ್ ಸೇವೆಯನ್ನು ಬಳಸಲು ಅಗತ್ಯವಿರುವ ಆ್ಯಪ್ಗಳನ್ನು ಅಭಿವೃದ್ಧಿಪಡಿಸಲು ದೇಶದ ವಿವಿಧ ಇಂಜಿನಿಯರಿಂಗ್ ಇನ್ಸ್ಟಿಟ್ಯೂಶನ್ಗಳಲ್ಲಿ 100 ಲ್ಯಾಬ್ಗಳನ್ನು ರಚಿಸಲು ಉಪಕ್ರಮ
3. ಈ ಲ್ಯಾಬ್ಗಳಲ್ಲಿ ಸ್ಮಾರ್ಟ್ ಕ್ಲಾಸ್ರೂಮ್ಗಳು, ಕೃಷಿ, ಆರೋಗ್ಯಕ್ಕೆ ಸಂಬಂಧಪಟ್ಟ ಆ್ಯಪ್ಗಳೂ ಅಭಿವೃದ್ಧಿಗೊಳ್ಳಲಿವೆ.
4. 7000 ಕೋಟಿ ರೂಪಾಯಿ ವೆಚ್ಚದಲ್ಲಿ ಇ-ಕೋರ್ಟ್ ಯೋಜನೆಯ ಮೂರನೇ ಹಂತವನ್ನು ಪ್ರಾರಂಭಿಸಲು ನಿರ್ಧಾರ