ಕೇಂದ್ರ ಸರ್ಕಾರ 2023-24ನೇ ಸಾಲಿನ ಕೇಂದ್ರ ಬಜೆಟ್ (Budget 2023 )ಬಜೆಟ್ ಮಂಡನೆ ಇಂದು ಬೆಳಗ್ಗೆ 11 ಗಂಟೆಯಿಂದ ನಡೆಯುತ್ತಿದ್ದು, ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನಾ ಭಾಷಣ ಪ್ರಾರಂಭಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಇದು ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಆಗಿರುವುದರಿಂದ ಭಾರಿ ಕುತೂಹಲ ಮೂಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕಿದು 11ನೇ ಬಜೆಟ್ ಆಗಿದೆ. ಜನಸಾಮಾನ್ಯರ ನಿರೀಕ್ಷೆಗಳು ಹಲವು ಇವೆ. ಪ್ರಸ್ತುತ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಿಸುವ ಅಂಶಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ..
ಉದ್ದಿಮೆಗಳಿಗೇನು ಯೋಜನೆ?
ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಕ್ರೆಡಿಟ್ ಗ್ಯಾರಂಟಿ ನೀಡಲು 9000 ಕೋಟಿ ರೂಪಾಯಿ ಮೀಸಲಿಡಲಾಗುವುದು. ಹಾಗೇ, ಈ ಉದ್ದಿಮೆಗಳಿಗೆ ಹೆಚ್ಚುವರಿಯಾಗಿ ಅಡಮಾನ ರಹಿತವಾಗಿ 2 ಲಕ್ಷ ಕೋಟಿ ರೂಪಾಯಿ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗುವುದು. ಇದು 2023ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ
ದೇಶದಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಒತ್ತು ನೀಡುವ ಸಲುವಾಗಿ, ಎಲ್ಲ ರಾಜ್ಯಗಳಲ್ಲೂ ಯುನಿಟಿ ಮಾಲ್ಗಳನ್ನು ಸ್ಥಾಪಿಸಲಾಗುವುದು ಮತ್ತು ದೇಖೋ ಅಪ್ನಾ ದೇಶ್ ಯೋಜನೆಯಡಿ ಪ್ರವಾಸಿ ತಾಣಗಳ ಅಭಿವೃದ್ಧಿ, ಸೃಷ್ಟಿಗೆ ಉತ್ತೇಜನ ಕೊಡಲಾಗುವುದು ಎಂದು ಬಜೆಟ್ನಲ್ಲಿ ಘೋಷಣೆ
ಬಾಯಿ ತಪ್ಪಿದ ನಿರ್ಮಲಾ ಸೀತಾರಾಮನ್
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹಳೆಯ, ಮಾಲಿನ್ಯ ಉಂಟು ಮಾಡುತ್ತಿರುವ ವಾಹನಗಳನ್ನು, ಆಂಬುಲೆನ್ಸ್‌ಗಳನ್ನು ಬದಲಾಯಿಸಲಾಗುವುದು. ಮಾಲಿನ್ಯ ಉಂಟು ಮಾಡುತ್ತಿರುವ ವಾಹನಗಳು(ಓಲ್ಡ್ ಪೊಲ್ಯುಟಿಂಗ್ ವೆಹಿಕಲ್ ) ಬದಲಿಗೆ ಬಾಯಿತಪ್ಪಿ ಓಲ್ಡ್ ಪೊಲಿಟಿಕಲ್ (ಹಳೆಯ ರಾಜಕಾರಣ) ಎಂದರು. ಆಗ ಸಭೆಯಲ್ಲಿದ್ದವರೆಲ್ಲ ನಗೆಗಡಲಲ್ಲಿ ತೇಲಿದರು. ಸ್ವಲ್ಪ ಹೊತ್ತು ನಗೆ ಬೀರಿದ ನಿರ್ಮಲಾ ಸೀತಾರಾಮನ್, ಅದೂ ಸರಿಯಾಗಿತ್ತು ಎಲ್ಲವೇ ಎಂದು ಭಾಷಣ ಮುಂದುವರಿಸಿದರು.
ಹಸಿರು ಹೈಡ್ರೋಜನ್ ಯೋಜನೆಗೆ 35 ಸಾವಿರ ಕೋಟಿ ರೂಪಾಯಿ
ಪೆಟ್ರೋಲ್-ಡೀಸೆಲ್ನಂಥ ಪಳಿಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಯೋಜನೆಗೆ ಒತ್ತು ನೀಡಲಾಗುವುದು. ಇಂಧನ ಪರಿವರ್ತನೆಗಾಗಿ 35, 000 ಕೋಟಿ ರೂಪಾಯಿ ವ್ಯಯಿಸಲು ನಿರ್ಧರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಿಸಿದ್ದಾರೆ.
ಆದಿವಾಸಿಗಳಿಗಾಗಿ ಅಭಿವೃದ್ಧಿ ಯೋಜನೆ
ಆದಿವಾಸಿಗಳಿಗಾಗಿ ಸುರಕ್ಷಿತ ವಸತಿ, ನೈರ್ಮಲ್ಯ, ಕುಡಿಯುವ ನೀರು ಮತ್ತು ವಿದ್ಯುತ್ ವ್ಯವಸ್ಥೆಗಾಗಿ 15,000 ಕೋಟಿ ರೂಪಾಯಿ ಮೌಲ್ಯದ ಮಿಷನ್ ಹಮ್ಮಿಕೊಂಡಿದ್ದಾಗಿ ಹೇಳಿದ ನಿರ್ಮಲಾ ಸೀತಾರಾಮನ್