ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಂಡಿಸಿದ ಬಜೆಟ್ (Budget 2024) ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಡಿಯೊ ಸಂದೇಶ ರವಾನಿಸಿರುವ ನರೇಂದ್ರ ಮೋದಿ, “ದೇಶದ ಬಡವರು, ಮಹಿಳೆಯರು, ಯುವಕರು ಹಾಗೂ ರೈತರ ಏಳಿಗೆಯನ್ನು ದೃಷ್ಟಿಯಲ್ಲಿಕೊಂಡು ಮಂಡಿಸಿರುವ ಬಜೆಟ್ ಇದಾಗಿದೆ. 2047ರ ವೇಳೆಗೆ ವಿಕಸಿತ ಭಾರತದ ಕಲ್ಪನೆ ಸಾಕಾರಗೊಳ್ಳಲು ಇದು ಸಹಕಾರಿಯಾಗಲಿದೆ” ಎಂದು ಹೇಳಿದ್ದಾರೆ.
“ವಿಕಸಿತ ಭಾರತ ಕಲ್ಪನೆಗೆ ಪ್ರಮುಖವಾಗಿರುವ ರೈತರು, ಮಹಿಳೆಯರು, ಯುವಕರು ಹಾಗೂ ಬಡವರ ಏಳಿಗೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಅದರಲ್ಲೂ, ನಾವೀನ್ಯತೆ ಹಾಗೂ ಸಂಶೋಧನೆಗೆ ಒಂದು ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ ಯುವಕರಿಗೆ ಹೊಸ ಉದ್ಯೋಗಗಳು ಸಿಗಲಿವೆ. ಆಧುನಿಕ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು ಬಜೆಟ್ ಏಣಿಯಾಗಿದೆ” ಎಂದು ತಿಳಿಸಿದರು.
The #ViksitBharatBudget benefits every section of the society and lays the foundation for a developed India. https://t.co/RgGTulmTac
— Narendra Modi (@narendramodi) February 1, 2024
ರೈಲ್ವೆ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟ ಕುರಿತು ಮಾತನಾಡಿದ ಅವರು, “ಸುಮಾರು 40 ಸಾವಿರ ರೈಲು ಬೋಗಿಗಳನ್ನು ವಂದೇ ಭಾರತ್ ರೈಲು ಬೋಗಿಗಳ ದರ್ಜೆಗೆ ಏರಿಸಲಾಗುತ್ತದೆ. ಇವುಗಳನ್ನು ಸಾಮಾನ್ಯ ರೈಲುಗಳಿಗೆ ಅಳವಡಿಸಲಾಗುತ್ತದೆ. ಇದರಿಂದ ದೇಶದ ಲಕ್ಷಾಂತರ ಜನ ಉನ್ನತ ಮಟ್ಟದ ರೈಲು ಬೋಗಿಗಳಲ್ಲಿ ಆರಾಮದಾಯಕವಾಗಿ ಪ್ರಯಾಣಿಸಲು ಸಾಧ್ಯವಾಗಲಿದೆ” ಎಂದು ತಿಳಿಸಿದರು.
“ಬಡವರು ಹಾಗೂ ಮಧ್ಯಮ ವರ್ಗದವರ ಏಳಿಗೆಗೆ ಕೇಂದ್ರ ಸರ್ಕಾರವು ಇದುವರೆಗೆ 4 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಿಸಿದೆ. ಮುಂದಿನ ಐದು ವರ್ಷಗಳಲ್ಲಿ ಇನ್ನೂ ಐದು ಕೋಟಿ ಮನೆಗಳನ್ನು ನಿರ್ಮಿಸಲಾಗುತ್ತದೆ. ಇನ್ನು, ಒಂದು ಕೋಟಿ ಮನೆಗಳ ಮೇಲೆ ಸೋಲಾರ್ ಪ್ಯಾನೆಲ್‌ಗಳನ್ನು ಉಚಿತವಾಗಿ ಅಳವಡಿಸಲಾಗುತ್ತದೆ. ಇದರಿಂದ ಜನ ಮಾಸಿಕವಾಗಿ 300 ಯುನಿಟ್‌ಗಳವರೆಗೆ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಹಾಗೆಯೇ, ಉತ್ಪಾದಿಸಿದ ವಿದ್ಯುತ್‌ಅನ್ನು ಸರ್ಕಾರಕ್ಕೇ ಮಾರಾಟ ಮಾಡುವ ಮೂಲಕ ವಾರ್ಷಿಕ ಸುಮಾರು 15 ಸಾವಿರ ರೂ. ಗಳಿಸಬಹುದು” ಎಂದು ಹೇಳಿದರು.
ಇದನ್ನೂ ಓದಿ: Budget 2024: ಗರ್ಭಕಂಠ ಕ್ಯಾನ್ಸರ್ ತಡೆಗೆ ಬಾಲಕಿಯರಿಗೆ ಉಚಿತ ಲಸಿಕೆ; ‘ಆರೋಗ್ಯ’ಕ್ಕೆ ಸಿಕ್ಕಿದ್ದೇನು?
“ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಬಡವರಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಆರೋಗ್ಯ ಭದ್ರತೆ ಒದಗಿಸಲಾಗಿದೆ. ಈ ಯೋಜನೆಯನ್ನು ಈಗ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೂ ವಿಸ್ತರಿಸಲಾಗಿದೆ. ರೈತರ ಏಳಿಗೆಗೂ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಒಂದು ಕೋಟಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ” ಎಂದು ತಿಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ