ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಮಧ್ಯಾಹ್ನ 2ಗಂಟೆಗೆ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಸತ್ ಬಜೆಟ್ ಅಧಿವೇಶನ (Budget Session 2023) ಜನವರಿ 31ರಂದು ಪ್ರಾರಂಭವಾಗಿದ್ದು, ಅಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದ್ದರು. ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಫೆ.8ರಂದು ಲೋಕಸಭೆಯಲ್ಲಿ ಉತ್ತರ ನೀಡಿದ್ದರು. ಹಾಗೇ, ಇಂದು ಮಧ್ಯಾಹ್ನ ರಾಜ್ಯಸಭೆಯಲ್ಲಿ ಉತ್ತರಿಸಲಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಮಾತನಾಡಿದ್ದ ದ್ರೌಪದಿ ಮುರ್ಮು ಕೇಂದ್ರ ಸರ್ಕಾರದ ಹಲವು ಸಾಧನೆಗಳ ಬಗ್ಗೆ ಉಲ್ಲೇಖಿಸಿದ್ದರು. ಕೊವಿಡ್ 19 ಸಾಂಕ್ರಾಮಿಕವನ್ನು ಸರ್ಕಾರ ಎದುರಿಸಿದ ರೀತಿ, ರೈತರು ಮತ್ತು ಮಹಿಳೆಯರ ಅನುಕೂಲಕ್ಕಾಗಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕಲ್ಯಾಣ ಯೋಜನೆಗಳ ಬಗ್ಗೆ ದ್ರೌಪದಿ ಮುರ್ಮು ಮಾತಾಡಿದ್ದರು. ಆದರೆ ಪ್ರತಿಪಕ್ಷಗಳು ದ್ರೌಪದಿ ಮುರ್ಮು ಭಾಷಣವನ್ನೇ ಟೀಕಿಸಿದ್ದವು.
ಇದನ್ನೂ ಓದಿ: PM Modi Parliament Speech: ಪ್ರತಿಪಕ್ಷಗಳ ಆರೋಪಗಳಿಗೆ ಗೇಲಿ ಮೂಲಕವೇ ಗೋಲಿ ಹೊಡೆದ ಮೋದಿ!
ಫೆ.8ರಂದು ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ‘ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಕೋಟ್ಯಂತರ ಭಾರತೀಯರಿಗೆ ಮಾರ್ಗದರ್ಶನ ನೀಡಿದರು. ಈ ರಾಷ್ಟ್ರದ ಮುಖ್ಯಸ್ಥೆಯಾಗಿರುವ ಅವರು ಅನೇಕರ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ’ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.