ಬೆಂಗಳೂರು: ಜನವರಿ 31ರಿಂದ ಬಜೆಟ್ ಅಧಿವೇಶನ (Budget Session 2023) ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆಯನ್ನು ಸೋಮವಾರ ದಿಲ್ಲಿಯಲ್ಲಿ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ 27 ಪಕ್ಷಗಳ 37 ನಾಯಕರು ಭಾಗವಹಿಸಿದ್ದರು. ಆದರೆ, ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಅಧಿವೇಶನದ ಮೊದಲನೇ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಬಳಿಕ ರಾಷ್ಟ್ರಪತಿಗಳ ಭಾಷಣ ಹಾಗೂ ಬಜೆಟ್ ಕುರಿತು ಚರ್ಚೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದಾರೆ. ಇನ್ನು ಪ್ರತಿಪಕ್ಷಗಳು, ಉದ್ಯಮಿ ಗೌತಮ್ ಅದಾನಿ, ಮೋದಿ ಕುರಿತ ಬಿಬಿಸಿ ಡಾಕ್ಯುಮೆಂಟರಿ, ಬೆಲೆಯೇರಿಕೆ ಸೇರಿ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧವಾಗಿವೆ.
ಸರ್ವ ಪಕ್ಷಗಳ ಸಭೆ
ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಸರ್ಕಾರವು ಸರ್ಪ ಪಕ್ಷ ಸಭೆಯನ್ನು ಆಯೋಜಿಸಿತ್ತು. ಪ್ರತಿಪಕ್ಷಗಳ ಬೇಡಿಕೆಯಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಫಲಪ್ರದ ಅಧಿವೇಶಕ್ಕೆ ಪ್ರತಿಪಕ್ಷಗಳ ಸಹಕಾರವೂ ಅತ್ಯಗತ್ಯವಾಗಿದೆ. ನಾವು ಯಾವುದೇ ಚರ್ಚೆಗೆ ಸಿದ್ಧರಿದ್ದೇವೆ ಎಂಬ ವಿಷಯವನ್ನು ಸಭೆಗೆ ತಿಳಿಸಿದ್ದೇವೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: Budget 2023 : ಕೇಂದ್ರ ಬಜೆಟ್ ಅಧಿವೇಶನ ಮಂಗಳವಾರ ಆರಂಭ, ಆರ್ಥಿಕ ಸಮೀಕ್ಷೆ ಮಂಡನೆ
”ಬಜೆಟ್ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಇಂದು(ಸೋಮವಾರ ಜ.30) ಸರ್ವ ಪಕ್ಷಗಳ ಸಭೆಯನ್ನು ನಡೆಸಲಾಯಿತು. ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ 27 ಪಕ್ಷದ 37 ನಾಯಕರು ಭಾಗವಹಿಸಿದ್ದರು. ನಿಯಮಾನುಸಾರ ಸಾಧ್ಯವಿರುವ ಎಲ್ಲ ವಿಷಯಗಳು ಕುರಿತು ಸರ್ಕಾರ ಚರ್ಚೆ ನಡೆಸಲು ಸಿದ್ಧ ಎಂದು ಸಭೆಯಲ್ಲಿ ತಿಳಿಸಲಾಯಿತು. ಎಲ್ಲ ಪಕ್ಷಗಳು ಸಹಕಾರ ನೀಡಿ ಅಧಿವೇಶನವನ್ನು ಯಶಸ್ವಿಗೊಳಿಸಬೇಕು ಎಂದು ನಾನು ಕೋರಿಕೊಳ್ಳುತ್ತೇನೆ” ಎಂದು ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.