Site icon Vistara News

Budget Session 2024: ಸಸ್ಪೆಂಡ್ ಆಗಿದ್ದ ಪ್ರತಿಪಕ್ಷಗಳ ಎಲ್ಲ ಸದಸ್ಯರ ಅಮಾನತು ತೆರವು!

Budget Session, suspension of all members of the opposition were revoked

ನವದೆಹಲಿ: ಜನವರಿ 31ರಿಂದ ಬಜೆಟ್ ಸಂಸತ್ (Budget Session 2024) ಅಧಿವೇಶನವು ಆರಂಭವಾಗಲಿದ್ದು, ಅದಕ್ಕೂ ಒಂದು ದಿನ ಮುಂಚೆಯೇ ಪ್ರತಿಪಕ್ಷಗಳ ಸಂಸತ್ ಸದಸ್ಯರ ಅಮಾನತು ತೆರವು ಮಾಡಲಾಗಿದೆ(Opposition Members Suspension Revoked). ಬುಧವಾರ 11 ರಾಜ್ಯಸಭೆ (Rajya Sabha) ಸದಸ್ಯರ ಅಮಾನತು ರದ್ದು ಮಾಡುವ ಮೂಲಕ 146 ಸಂಸತ್ ಸದಸ್ಯರ ಸಸ್ಪೆಂಡ್ ತೆರವುಗೊಂಡಂತಾಗಿದೆ. ಕಳೆದ ಚಳಿಗಾಲದ ಅಧಿವೇಶನದ ವೇಳೆ ಸಂಸತ್ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಆಗ್ರಹಿಸುತ್ತಿದ್ದ ಪ್ರತಿಕ್ಷಗಳ 146 ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಕರ್ನಾಟಕದವರೇ ಆದ ಪ್ರಹ್ಲಾದ್ ಜೋಶಿ ಅವರೂ ಅಮಾನತು ತೆರವು ಮಾಡಲು ಮನವಿ ಮಾಡುವುದಾಗಿ ಹೇಳಿದ್ದರು.

ಕಳೆದ ತಿಂಗಳು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರು ಸೇರಿದಂತೆ 146 ಸಂಸದರನ್ನು ಅಮಾನತುಗೊಳಿಸಲಾಗಿತ್ತು. 146 ಸದಸ್ಯರ ಪೈಕಿ 132 ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿತ್ತು. ಹಾಗಾಗಿ, ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ಅವರ ಅಮಾನತು ಕೂಡ ರದ್ದಾಗಿದೆ.

ಉಳಿದ 14 ಸಂಸದರ ಪೈಕಿ 11 ಸದಸ್ಯರು ರಾಜ್ಯಸಭೆ ಮತ್ತು 3 ಲೋಕಸಭೆ ಸದಸ್ಯರ ಅಮಾನತ್ತನ್ನು ಎರಡೂ ಸದನಗಳ ಹಕ್ಕು ಬಾಧ್ಯತಾ ಸಮಿತಿಗೆ ರೆಫರ್ ಮಾಡಲಾಗಿತ್ತು. ಲೋಕಸಭೆಯ ಸಮಿತಿಯು ಜನವರಿ 12ರಂದೇ ಮೂವರು ಲೋಕಸಭೆ ಸದಸ್ಯರ ಸಸ್ಪೆಂಡ್ ಅನ್ನು ತೆರವು ಮಾಡಿದರೆ, ಜನವರಿ 30ರಂದು 11 ರಾಜ್ಯಸಭೆ ಸದಸ್ಯರ ಅಮಾನತು ವಾಪಸ್ ಪಡೆಯಲಾಗಿದೆ.

ಗೃಹ ಸಚಿವರ ಹೇಳಿಕೆಗೆ ಪ್ರತಿಪಕ್ಷಗಳ ಬೇಡಿಕೆಗೆ ಸಂಬಂಧಿಸಿದಂತೆ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸದನದ ಒಳಗಿನ ಭದ್ರತೆಯು ಸೆಕ್ರೆಟರಿಯೇಟ್ ವ್ಯಾಪ್ತಿಗೆ ಒಳಪಟ್ಟಿದೆ ಮತ್ತು ಕೇಂದ್ರವು ಮಧ್ಯಪ್ರವೇಶಿಸಲು ಬಿಡುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಸರ್ಕಾರವು ಲೋಕಸಭೆಯ ಕಾರ್ಯದರ್ಶಿಯ (ಜವಾಬ್ದಾರಿಯಲ್ಲಿ) ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನಾವು ಅದಕ್ಕೂ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದರು.

ಚಳಿಗಾಲದ ಅಧಿವೇಶನದ ವೇಳೆ 140ಕ್ಕೂ ಅಧಿಕ ಸಂಸತ್ ಸದಸ್ಯರನ್ನು ಅಮಾನತು ಮಾಡಿರುವುದು ಯಾವುದೇ ಚರ್ಚೆಗಳಿಲ್ಲದೇ ಕಾನೂನುಗಳನ್ನು ಪಾಸು ಮಾಡಿಕೊಳ್ಳುವುದು ಸರ್ಕಾರದ ಹುನ್ನಾರವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ಕಳೆದ ತಿಂಗಳು ನಡೆದ ಚಳಿಗಾಲದ ಅಧಿವೇಶನದ ವೇಳೆ ಲೋಕಸಭೆ ಗ್ಯಾಲರಿ ಪ್ರವೇಶಿಸಿದ್ದ ಇಬ್ಬರು ಕಲಾಪದ ವೇಳೆ ಸದಸ್ಯರಿದ್ದ ಜಾಗಕ್ಕೆ ತೆರಳಿ ಸ್ಮೋಕ್ ಕಲರ್ ಬಾಂಬ್ ಸಿಡಿಸಿದ್ದರು. ಅದೇ ವೇಳೆ, ಆ ಇಬ್ಬರ ಸಂಗಾತಿಗಳು ಸಂಸತ್ ಹೊರಗೂ ಅದೇ ರೀತಿ ಸ್ಮೋಕ್ ಬಾಂಬ್ ಸಿಡಿಸಿ ಪ್ರತಿಭಟನೆ ನಡೆಸಿದ್ದರು. ಸಂಸತ್ ಭದ್ರತಾ ವೈಫಲ್ಯ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದವು.

ಸಂಸದೀಯ ವ್ಯವಾಹಾರಗಳ ಸಚಿವ ಜೋಶಿ ಮನವಿ

ಬಜೆಟ್‌ ಅಧಿವೇಶನಕ್ಕೂ ಮುಂಚೆಯೇ ಅಮಾನತುಗೊಂಡಿದ್ದ ಪ್ರತಿಪಕ್ಷಗಳ ಸದಸ್ಯರ ಸಸ್ಪೆಂಡ್ ರದ್ದು ಮಾಡುವಂತೆ ಮನವಿ ಮಾಡುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಹೇಳಿದ್ದರು. ಈ ಕುರಿತು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿರುವ ಅವರು, ಸಂಬಂಧಪಟ್ಟ ವಿಶೇಷಾಧಿಕಾರ ಸಮಿತಿಯೊಂದಿಗೆ ಮಾತನಾಡಿ ಅಮಾನತುಗೊಂಡಿರುವ ಎಲ್ಲ ಸದಸ್ಯರ ಅಮಾನತು ಹಿಂಪಡೆಯುವಂತೆ ಸಭಾಧ್ಯಕ್ಷರು ಹಾಗೂ ಸಭಾಪತಿಗಳಿಗೆ ಸರ್ಕಾರದ ಪರವಾಗಿ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Budget Session: ಜ.31ರಿಂದ ಬಜೆಟ್ ಅಧಿವೇಶನ; ಕಿಸಾನ್ ಸಮ್ಮಾನ್ ನಿಧಿ ಹಣ ಡಬಲ್?

Exit mobile version