Site icon Vistara News

Viral News: ಆಹಾರದ ಜತೆಗೆ ಮಂಗಳಸೂತ್ರವನ್ನೂ ʼಸ್ವಾಹಾʼ ಮಾಡಿದ ಎಮ್ಮೆ!

buffello

buffello

ಮುಂಬೈ: ಮಹಾರಾಷ್ಟ್ರದ (Maharashtra) ವಾಶಿಂ ಜಿಲ್ಲೆಯಲ್ಲಿ ಇತ್ತೀಚೆಗೆ ಎಮ್ಮೆಯೊಂದು (buffalo) ಎಲ್ಲರ ಗಮನ ಸೆಳೆದಿತ್ತು. ಯಾಕೆಂದರೆ ಇದು ಮಹಿಳೆಯೊಬ್ಬರ ಬರೋಬ್ಬರಿ 1.5 ಲಕ್ಷ ರೂ. ಬೆಲೆಬಾಳುವ ಸುಮಾರು 25 ಗ್ರಾಂ ಚಿನ್ನದ ಮಂಗಳ ಸೂತ್ರವನ್ನು ನುಂಗಿ ಹಾಕಿತ್ತು. ಬಳಿಕ ಶಸ್ತ್ರ ಚಿಕಿತ್ಸೆ ನಡೆಸಿ ಈ ಆಭರಣವನ್ನು ಹೊರ ತೆಗೆಯಲಾಗಿದೆ. ಸದ್ಯ ಈ ವಿಚಾರ ವೈರಲ್‌ ಆಗಿದೆ (Viral news).

ಈ ಕುರಿತಾದ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದ್ದು, ವೈರಲ್‌ ಆಗಿದೆ. ʼʼಎಮ್ಮೆ ಮಂಗಳಸೂತ್ರವನ್ನು ನುಂಗಿ ಹಾಕಿರುವ ಘಟನೆ ವಾಶಿಂ ಜಿಲ್ಲೆಯಲ್ಲಿ ನಡೆದಿದೆ. ಬಳಿಕ ಶಸ್ತ್ರ ಚಿಕಿತ್ಸೆ ನಡೆಸಿ ಆ ಮಂಗಳಸೂತ್ರವನ್ನು ಹೊರ ತೆಗೆಯಲಾಗಿದೆʼʼ ಎಂದು ಎಕ್ಸ್‌ನಲ್ಲಿ ಬರೆಯಲಾಗಿದೆ.

ಮೆಟಲ್‌ ಡಿಟೆಕ್ಟರ್‌ ಮೂಲಕ ಎಮ್ಮೆಯ ಹೊಟ್ಟೆಯೊಳಗಿರುವ ಮಂಗಳಸೂತ್ರದ ಬಗ್ಗೆ ತಿಳಿದುಬಂದಿತ್ತು. ಕೊನೆಗೆ ತಜ್ಞರು ಯಶಸ್ವಿಯಾಗಿ ಆಪರೇಷನ್‌ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್‌ 1ರಂದು ಈ ಪೋಸ್ಟ್‌ ಹಾಕಲಾಗಿದ್ದು ಈಗಾಗಲೇ 33,000 ಅಧಿಕ ಮಂದಿ ವೀಕ್ಷಿಸಿದ್ದಾರೆ.

ಘಟನೆಯ ವಿವರ

ರಾಮಹರಿ ಎನ್ನುವ ರೈತನ ಪತ್ನಿ ಸ್ನಾನಕ್ಕೆ ಹೋಗುವಾಗ ಮಂಗಳಸೂತ್ರವನ್ನು ಬಿಚ್ಚಿಟ್ಟಿದ್ದರು. ಎಮ್ಮೆಗೆ ಆಹಾರ ನೀಡುವ ತಟ್ಟೆಯಲ್ಲಿ ಆಕೆ ಮಂಗಳಸೂತ್ರವನ್ನು ಇರಿಸಿದ್ದರು. ಬಳಿಕ ಅದನ್ನು ಮರೆತೇ ಹೋಗಿದ್ದರು. ಬಳಿಕ ಆಹಾರ ಪದಾರ್ಥವನ್ನು ಅದೇ ತಟ್ಟೆಗೆ ಹಾಕಿ ಎಮ್ಮೆಯ ಮುಂದೆ ಆ ಮಹಿಳೆ ಇಟ್ಟಿದ್ದರು. ಎಷ್ಟೋ ಹೊತ್ತಾದ ಬಳಿಕ ಮಹಿಳೆಗೆ ತನ್ನ ಮಂಗಳಸೂತ್ರದ ನೆನಪಾಗಿದೆ. ಅದಕ್ಕಾಗಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಕೊನೆಗೆ ಎಮ್ಮೆಯ ಆಹಾರ ತಟ್ಟೆಯಲ್ಲಿ ಇಟ್ಟಿದ್ದು ನೆನಪಾಗಿ ನೋಡಿದರೆ ಎಮ್ಮೆ ಆಹಾರದ ಜತೆಗೆ ಅದನ್ನೂ ನುಂಗಿ ಬಿಟ್ಟಿತ್ತು. ಕೊನೆಗೆ ಮಹಿಳೆ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಕೊನೆಗೆ ಪಶು ವೈದ್ಯರನ್ನು ಕರೆದು ಮೆಟಲ್‌ ಡಿಟೆಕ್ಟರ್‌ ಮೂಲಕ ಪರೀಕ್ಷಿಸಿದಾಗ ಮಂಗಳಸೂತ್ರ ಎಮ್ಮೆಯ ಹೊಟ್ಟೆಯಲ್ಲಿರುವುದು ಗೊತ್ತಾಯಿತು.

ಇದನ್ನೂ ಓದಿ: Viral Video: ಕಡಲ ತೀರಕ್ಕೆ ಬಂತು ತಿಮಿಂಗಿಲ ಶವ; ಹತ್ತಿರ ಹೋಗಬೇಡಿ ಬ್ಲಾಸ್ಟ್‌ ಆಗತ್ತೆ ಎಂದ ನೆಟ್ಟಿಗರು

ಹರಿಯಾಣದಲ್ಲೂ ಇಂತಹದ್ದೇ ಘಟನೆ ನಡೆದಿತ್ತು

ಈ ರೀತಿಯ ಘಟನೆ ನಡೆದಿರುವುದು ಇದು ಮೊದಲ ಸಲವೇನಲ್ಲ. 4 ವರ್ಷಗಳ ಹಿಂದೆ ಅಂದರೆ 2019ರಲ್ಲಿ ಹರಿಯಾಣದ ಸಿರ್ಸಾದಲ್ಲಿ ಗೂಳಿಯೊಂದು 40 ಗ್ರಾಂ ಚಿನ್ನವನ್ನು ನುಂಗಿ ಬಿಟ್ಟಿತ್ತು. ಮನೆಯೊಂದರ ಸದಸ್ಯರು ಧರಿಸಿದ್ದ ಆಭರಣಗಳನ್ನು ಕಳಚಿ ಪಾತ್ರಯೊಂದರಲ್ಲಿ ಇಟ್ಟಿದ್ದರು. ಇದನ್ನು ಗಮನಿಸದ ಕುಟುಂಬದ ಸದಸ್ಯರೊಬ್ಬರು ಅದೇ ಪಾತ್ರೆಗೆ ಅಡುಗೆ ಮನೆಯ ತರಕಾರಿ ವೇಸ್ಟ್‌ ಅನ್ನು ತುಂಬಿ ಹೊರಗೆ ಚೆಲ್ಲಿದ್ದರು. ಅದೇ ದಾರಿಯಾಗಿ ಬಂದ ಗೂಳಿ ಹಸಿವಾಗಿದ್ದರಿಂದ ಆ ತರಕಾರಿ ವೇಸ್ಟ್‌ ಜೊತೆಗೆ ಗೊತ್ತಿಲ್ಲದೆ ಚಿನ್ನವನ್ನೂ ಹೊಟ್ಟೆಗಿಳಿಸಿತ್ತು. ಚಿನ್ನ ಕಾಣದೆ ಕಂಗಾಲಾದ ಮನೆ ಮಂದಿಯೆಲ್ಲ ಸುತ್ತಮುತ್ತ ಹುಡುಕಾಡಿದ್ದರು. ಕೊನೆಗೆ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ನಿಜ ವಿಷಯ ಬೆಳಕಿಗೆ ಬಂತು. ಅದು ದಾರಿಹೋಕ ಗೂಳಿಯಾಗಿದ್ದರಿಂದ ಅದನ್ನು ಹುಡುಕಲು ಮನೆಯವರಿಗೆ ಸುಮಾರು 5-6 ಗಂಟೆ ಬೇಕಾಯಿತು. ನಂತರ ಆ ಗೂಳಿಯನ್ನು ಮನೆಗೆ ಕರೆತಂದು ಅದು ಸೆಗಣಿಯ ಜೊತೆಗೆ ಆಭರಣವನ್ನೂ ಹೊರ ಹಾಕುವವರೆಗೆ ಕಾದು ಕುಳಿತಿದ್ದರು.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version