Site icon Vistara News

Building Collapse: ಕುಸಿದು ಬಿದ್ದ 3 ಅಂತಸ್ತಿನ ಕಟ್ಟಡ; ಮಗು ಸೇರಿ ಮೂವರು ಸಾವು, ಇನ್ನೂ7ಮಂದಿ ಸಿಲುಕಿರುವ ಶಂಕೆ

Building collapse in Bhiwandi of Maharashtra 3 killed

#image_title

ಮುಂಬಯಿ: ಮಹಾರಾಷ್ಟ್ರದ ಭಿವಂಡಿ ಎಂಬಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದ (Building Collapse in Bhiwandi) ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಸೇರಿ ಒಟ್ಟು 14ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಇನ್ನೂ ಏಳು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಏಪ್ರಿಲ್​ 29ರಂದು ಮಧ್ಯಾಹ್ನ 2ಗಂಟೆಗೆ ಕಟ್ಟಡ ಕುಸಿದು ಬಿದ್ದಿದೆ (Building Collapse). ಆಗಿನಿಂದಲೂ ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ನಡೆಯುತ್ತಲೇ ಇದೆ. ಪೊಲೀಸರ ತಂಡ, ಟಾರ್ಗೆಟ್​ ಡಿಸಾಸ್ಟರ್​​ ರಿಸ್ಪಾನ್ಸ್​ ಫೋರ್ಸ್​ (ಟಿಡಿಆರ್​ಎಫ್​), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF) ತಂಡಗಳು ಸ್ಥಳದಲ್ಲಿ ಸನ್ನದ್ಧರಾಗಿದ್ದು, ಅವಶೇಷಗಳಡಿ ಸಿಲುಕಿರುವವ ರಕ್ಷಣೆ ಮಾಡುತ್ತಿವೆ.

ಕಟ್ಟಡದ ಗ್ರೌಂಡ್​ ಫ್ಲೋರ್​​ನಲ್ಲಿ ಒಂದು ಗೋಡೌನ್ ಇದ್ದು, ಕೆಲಸಗಾರರು ಕೆಲಸ ಮಾಡುತ್ತಿದ್ದರು. ಎರಡನೇ ಫ್ಲೋರ್​​ನಲ್ಲಿ ಕುಟುಂಬವೊಂದು ವಾಸಿಸಿತ್ತು. ಸದ್ಯ ನಾಲ್ಕೂವರೆ ವರ್ಷದ ಮಗು, 40 ವರ್ಷದ ಪುರುಷ ಮತ್ತು 26ವರ್ಷದ ಮಹಿಳೆಯ ಮೃತದೇಹವನ್ನು ಅವಶೇಷಗಳಡಿಯಿಂದ ತೆಗೆಯಲಾಗಿದೆ. ರಕ್ಷಿಸಲ್ಪಟ್ಟ 14 ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಅವಿನಾಶ್ ಸಾವಂತ್ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ವರದಿ ಪಡೆದು, ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದ ಅವರು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅವರು ಸ್ಥಳೀಯ ಆಡಳಿತಕ್ಕೆ ಸೂಚಿಸಿದ್ದಾರೆ. ಥಾಣೆ ಜಿಲ್ಲಾಧಿಕಾರಿ ಅಶೋಕ್ ಶಿಂಗಾರೆ, ಕೇಂದ್ರ ಸಚಿವ ಕಪಿಲ್ ಪಾಟೀಲ್​ ಮತ್ತಿತರರು ಅಲ್ಲಿನ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದಾರೆ.

Exit mobile version