Site icon Vistara News

Bulldozer Action: ಅಯೋಧ್ಯೆಯಲ್ಲಿ ಬುಲ್ಡೋಜರ್‌ ಸದ್ದು; ಅಪ್ರಾಪ್ತೆಯ ಅತ್ಯಾಚಾರ ಆರೋಪಿ ಮೊಯೀದ್‌ ಖಾನ್‌ಗೆ ಸೇರಿದ ಕಟ್ಟಡ ಪುಡಿಪುಡಿ

Bulldozer Action

ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮತ್ತೊಮ್ಮೆ ಬುಲ್ಡೋಜರ್‌ ಸದ್ದು ಮಾಡಿದೆ. ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳ ಪೈಕಿ ಓರ್ವನಿಗೆ ಸೇರಿದ ಅಕ್ರಮ ಬಹುಮಹಡಿ ಕಟ್ಟಡವನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸಲಾಗಿದೆ. ಸಮಾಜಾದಿ ಪಾರ್ಟಿ (SP)ಯ ಮುಖಂಡ, ಅತ್ಯಾಚಾರ ಆರೋಪಿ ಮೊಯೀದ್‌ ಖಾನ್‌ (Moid Khan)ಗೆ ಸೇರಿದ, ಅಯೋಧ್ಯೆಯಲ್ಲಿರುವ ಕಟ್ಟಡವನ್ನು ಗುರುವಾರ (ಆಗಸ್ಟ್‌ 22) ಜಿಲ್ಲಾಡಳಿತ ಕೆಡವಿ ಹಾಕಿದೆ (Bulldozer Action).

ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಅದರ ಭಾಗವಾಗಿ ಈ ಅಕ್ರಮ ಕಟ್ಟಡವನ್ನು‍‍ ಧ್ವಂಸಗೊಳಿಸಲಾಗಿದೆ. ಘೋರ ಅಪರಾಧಗಳನ್ನು ಎಸಗಿದರೆ ಯಾವ ರೀತಿ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವುದನ್ನು ತಿಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆ ಜಿಲ್ಲೆಯ ಭಾದಾರ್ಸ ಪ್ರದೇಶದಲ್ಲಿ ಕಳೆದ ವರ್ಷ ನಿರ್ಮಿಸಲಾದ, 3 ಕೋಟಿ ರೂ. ಬೆಲೆಬಾಳುವ, 4,000 ಸ್ಕ್ವೈರ್‌ ಫೀಟ್‌ನಲ್ಲಿ ಹರಡಿದ್ದ ಈ ಕಟ್ಟಡವನ್ನು 3 ಬುಲ್ಡೋಜರ್‌ ಮತ್ತು ಎಕ್ಸ್‌ಕವೇಟರ್‌ ಮೂಲಕ ಕೆಡವಲಾಗಿದೆ. ಕಳೆದ ತಿಂಗಳು ಅಯೋಧ್ಯೆಯಲ್ಲಿ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 65 ವರ್ಷದ ಮೊಯೀದ್‌ ಖಾನ್‌ ಮತ್ತು ಆತನ ಸಹಾಯಕ ರಾಜು ಎಂಬಾತನನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸಂಚಲ ಸೃಷ್ಟಿಸಿತ್ತು ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾವಿಸಿದ್ದರು.

ಸದ್ಯ ಸಂತ್ರಸ್ತ ಬಾಲಕಿಗೆ ಅಬಾರ್ಷನ್‌ ಮಾಡಿಸಲಾಗಿದ್ದು, ಆಕೆಗೆ ಭದ್ರತೆ ಒದಗಿಸಲಾಗಿದೆ. ಆಕೆಯ ಮನೆಯ ಸುತ್ತ 25 ಪೊಲೀಸರನ್ನು ಕಾವಲು ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್‌ ಕ್ಷೇತ್ರದ ಸಂಸದ, ಸಮಾಜವಾದಿ ಪಾರ್ಟಿಯ ಮುಖಂಡ ಅವಧೇಶ್ ಪ್ರಸಾದ್‌ಗೆ ಈ ಮೊಯೀದ್‌ ಖಾನ್‌ ತುಂಬ ಆಪ್ತ ಎನ್ನಲಾಗಿದೆ.

ಬಿಗಿ ಭದ್ರತೆ

ಕಟ್ಟಡ ತೆರವುಗೊಳಿಸುವ ಕಾರ್ಯಾಚರಣೆಯ ವೇಳೆ ಸ್ಥಳದಲ್ಲಿ ಬಿಗಿ ಭದ್ರತೆ ಕೂಗೊಳ್ಳಲಾಗಿತ್ತು. ಪ್ರೊವಿನ್ಶಿಯಲ್‌ ಆರ್ಮ್‌ಡ್‌ ಕ್ಯಾಸ್ಟಬುಲರಿ (PAC)ಯ ತುಕುಡಿ ಮತ್ತು ವಿವಿಧ ಠಾಣೆಗಳ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಜಿಲ್ಲಾಡಳಿತದ ಪ್ರಕಾರ ಕಟ್ಟಡದ ಮುಕ್ಕಾಲು ಭಾಗವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (PNB) ಅನ್ನು ಒಂದು ದಿನದ ಮೊದಲು ಸ್ಥಳಾಂತರಿಸಲಾಗಿತ್ತು. ವಿಶೇಷ ಎಂದರೆ ಮೂರು ವಾರಗಳ ಹಿಂದೆ ಮೊಯೀದ್‌ ಖಾನ್‌ಗೆ ಸೇರಿದ ಇನ್ನೊಂದು ಅಕ್ರಮ ಕಟ್ಟಡವನ್ನು ಜಿಲ್ಲಾಡಳಿತ ನೆಲಸಮಗೊಳಿಸಿತ್ತು.

ಮತ್ತೊಂದು ಬೆಳವಣಿಗೆಯೊಂದರಲ್ಲಿ ಅತ್ಯಾಚಾರ ಆರೋಪದ ಮೇಲೆ ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಮಾಜಿ ಬ್ಲಾಕ್ ಅಧ್ಯಕ್ಷ ನವಾಬ್ ಸಿಂಗ್‌ಗೆ ಸೇರಿದ ಅಕ್ರಮ ಆಸ್ತಿಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಗುರುವಾರ ನವಾಬ್ ಸಿಂಗ್‌ ಕಿರಿಯ ಸಹೋದರ ನೀಲು ಯಾದವ್‌ನ ಸೋದರ ಮಾವನ ಕೋಲ್ಡ್ ಸ್ಟೋರೇಜ್ ಅನ್ನು ನಾಶಪಡಿಸಲಾಗಿದೆ.

ಇದನ್ನೂ ಓದಿ: Rajendra Nagar Tragedy: 3 IAS ಆಕಾಂಕ್ಷಿಗಳ ಸಾವು ಪ್ರಕರಣ; ಸ್ಥಳದಲ್ಲಿ ಬುಲ್ಡೋಜರ್‌ಗಳ ಗರ್ಜನೆ!

Exit mobile version