ಮುಂಬಯಿ: ಸೋಮವಾರ ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮುಂಬಯಿಯಲ್ಲಿ ನಡೆದ ಶೋಭಾಯಾತ್ರೆ ಮೇಲೆ ಕಲ್ಲು ತೂರಿ ಗಲಭೆಗೆ ಕಾರಣರಾದ ಆರೋಪಿಗಳ ಮನೆಗಳ ಮೇಲೆ ಮಹಾರಾಷ್ಟ್ರ ಆಡಳಿತ ಬುಲ್‌ಡೋಜರ್ ಹರಿಸಿ (Bulldozer Action) ಧ್ವಂಸ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಮ ಮಂದಿರ ಪ್ರಾಣ ಪ್ರತಿಷ್ಠೆ ನೆರವೇರಿಸಿದ ಬಳಿಕ ನಡೆದ ರಾತ್ರಿ ವೇಳೆಗೆ ಶ್ರೀರಾಮ ಶೋಭಾಯಾತ್ರೆ ಮೀರಾ ರೋಡ್‌ನಲ್ಲಿ ನಡೆದಿತ್ತು. ಅಲ್ಲಿನ ನಯಾ ನಗರ ಪ್ರದೇಶದ ಮೂಲಕ ರ್ಯಾಲಿ ಹಾದು ಹೋಗುತ್ತಿದ್ದಂತೆ ಕಲ್ಲು ತೂರಾಟ ನಡೆದ ಘರ್ಷಣೆ ಭುಗಿಲೆದ್ದಿತ್ತು. ಕೇಸರಿ ಧ್ವಜಗಳನ್ನು ಹಾಕಿದ್ದ ಕಾರುಗಳು ಮತ್ತು ಬೈಕ್‌ಗಳನ್ನು ಹೊಂದಿದ್ದ ಮೆರವಣಿಗೆಯ ಮೇಲೆ ಗುಂಪೊಂದು ಕಲ್ಲು ತೂರಿತ್ತು. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದರು.
ಭಾನುವಾರ ಸಂಜೆ ಮತ್ತು ಸೋಮವಾರ ಮಧ್ಯಾಹ್ನದ ಘಟನೆಗಳ ವೀಡಿಯೊಗಳು ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿವೆ. ಅವುಗಳಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲುಗಳನ್ನು ಎಸೆಯುವುದನ್ನು ತೋರಿಸಿದ್ದವು. ಗುಂಪುಗಳು ಕಲ್ಲು ಮತ್ತು ದೊಣ್ಣೆಗಳಿಂದ ಕಾರುಗಳನ್ನು ಧ್ವಂಸಗೊಳಿಸಿದ್ದವು.
ಇದಾದ ಬಳಿಕ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹನ್ನೆರಡು ಜನರನ್ನು ಬಂಧಿಸಿದ್ದಾರೆ. ನಂತರ ಮೀರಾ ರೋಡ್ ಉಪನಗರದಲ್ಲಿರುವ ಆರೋಪಿಗಳ ಹಲವು ʻಅಕ್ರಮ’ ನಿರ್ಮಾಣಗಳನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದ್ದಾರೆ. “ಈ ಪ್ರದೇಶದಲ್ಲಿ 15 ಕಾನೂನುಬಾಹಿರ ಆಸ್ತಿಗಳನ್ನು ಬುಲ್ಡೋಜ್ ಮಾಡಲಾಗುತ್ತಿದೆ” ಎಂದು ಪೊಲೀಸರು ಹೇಳಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸೋಮವಾರ ರಾತ್ರಿ “ಕಾನೂನು ಮತ್ತು ಸುವ್ಯವಸ್ಥೆಯನ್ನು ಅಡ್ಡಿಪಡಿಸಲು ಪ್ರಯತ್ನಿಸುವ ಯಾರೇ ಆದರೂ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ” ಎಂದು ಎಕ್ಸ್ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
“ಮೀರಾ-ಭಯಂದರ್‌ನ ನಯಾ ನಗರ ಪ್ರದೇಶದಲ್ಲಿ ನಡೆದ ಘಟನೆಯ ಸಂಪೂರ್ಣ ವಿವರಗಳನ್ನು ಪಡೆಯಲಾಗಿದೆ. ನಾನು ಸೋಮವಾರ ಮುಂಜಾನೆ 3.30ರವರೆಗೆ ಮೀರಾ-ಭಯಂದರ್ ಪೊಲೀಸ್ ಆಯುಕ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಇತರ ಆರೋಪಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು ಯಾರಾದರೂ ಪ್ರಯತ್ನಿಸಿದರೆ ನಾವು ಸಹಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
“ಭಾನುವಾರ ರಾತ್ರಿ 11 ಗಂಟೆಗೆ ಹಿಂದೂ ಸಮುದಾಯದ ಕೆಲವರು ಮೂರು-ನಾಲ್ಕು ವಾಹನಗಳಲ್ಲಿ ಘೋಷಣೆಗಳನ್ನು ಕೂಗುತ್ತಿದ್ದಾಗ ಸಂಘರ್ಷ ಆರಂಭವಾಯಿತು. ಸ್ವಲ್ಪ ಸಮಯದ ನಂತರ, ಹಿಂದೂ ಸಮುದಾಯ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆಲವು ಜನರ ನಡುವೆ ವಾಗ್ವಾದ ನಡೆಯಿತು. ಹದಗೆಟ್ಟ ಪರಿಸ್ಥಿತಿಯನ್ನು ಪೊಲೀಸರು ತಹಬಂದಿಗೆ ತಂದರು” ಎಂದು ಉಪ ಪೊಲೀಸ್ ಆಯುಕ್ತ ಜಯಂತ್ ಬಜ್ಬಲೆ ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಈ ಬುಲ್ಡೋಜ್ ಶಿಕ್ಷೆಯನ್ನು ಆರಂಭಿಸಿತ್ತು. ನಂತರ ಹಲವಾರು ಬಿಜೆಪಿ ನೇತೃತ್ವದ ಸರ್ಕಾರಗಳು ಅಪರಾಧಿಗಳ ವಿರುದ್ಧ ಇದನ್ನು ಪ್ರಯೋಗಿಸುತ್ತಿವೆ.
ಇದನ್ನೂ ಓದಿ: ಹಿಂದು ಹುಡುಗನ ಕುತ್ತಿಗೆಗೆ ಬೆಲ್ಟ್ ಕಟ್ಟಿ, ನಾಯಿಯಂತೆ ನಡೆಸಿಕೊಂಡ ಮುಸ್ಲಿಮರು; ಮನೆ ಧ್ವಂಸಕ್ಕೆ ಹೊರಟ ಬುಲ್ಡೋಜರ್