Site icon Vistara News

ಬುಂದೇಲ್‌ ಖಂಡ Expressway: ಪ್ರಧಾನಿ ಮೋದಿ ಉದ್ಘಾಟಿಸಿದ ಹೆದ್ದಾರಿಯ 8 ವಿಶೇಷಗಳು

bundelkhand express way

ಜಲೌನ್‌ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ೨೯೬ ಕಿಲೋಮೀಟರ್‌ ಉದ್ದದ ಬುಂದೇಲ್‌ ಖಂಡ ಎಕ್ಸ್‌ಪ್ರೆಸ್‌ ವೇಯನ್ನು ಉತ್ತರ ಪ್ದೇಶದ ಜಲೌನ್‌ ಜಿಲ್ಲೆಯಲ್ಲಿ ಉದ್ಘಾಟಿಸಿದರು. ಬುಂದೇಲ್‌ ಖಂಡದ ಅಭಿವೃದ್ಧಿಗೆ ವೇಗ ನೀಡಲಿರುವ ಸ್ಥಳೀಯ ಆರ್ಥಿಕತೆ ಮತ್ತು ಸಂಪರ್ಕಕ್ಕೆ ಇದು ಹೆದ್ದಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದು ಎಲ್ಲರನ್ನೂ ಜೋಡಿಸುವ ಅಭಿವೃದ್ಧಿಯ ಹೆದ್ದಾರಿ
೧. ೨೯೬ ಕಿ.ಮೀ ಉದ್ದದ ಈ ಹೆದ್ದಾರಿಯನ್ನು ೧೪,೮೫೦ ಕೋಟಿ ರೂ. ವೆಚ್ಚದಲ್ಲಿ ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ ವೇಸ್‌ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದೆ.
೨. ಸದ್ಯಕ್ಕೆ ಇದು ಚತುಷ್ಪಥ ಹೆದ್ದಾರಿಯಾಗಿದೆ. ಮುಂದೆ ಇದನ್ನು ಷಟ್ಪಥವಾಗಿ ಅಭಿವೃದ್ಧಿಪಡಿಸಲು ಅವಕಾಶವಿದೆ.
೩. ಚಿತ್ರಕೂಟದ ಭರತ್‌ಕೂಪದಲ್ಲಿ ಆರಂಭವಾಗುವ ಈ ಹೆದ್ದಾಗಿ ಬಳಿಕ ಇಟಾವಾದಲ್ಲಿ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ ವೇಯನ್ನು ಸೇರಿಕೊಳ್ಳುತ್ತದೆ.
೪. ಈ ಹೆದ್ದಾರಿ ಮೂಲಕ ಪ್ರಯಾಣಿಸಿದರೆ ದಿಲ್ಲಿ ಮತ್ತು ಚಿತ್ರಕೂಟ ನಡುವಿನ ಪ್ರಯಾಣದ ಅವಧಿ ೪೦% ಕಡಿಮೆಯಾಗಲಿದೆ. ಅಂದರೆ ಈಗ ಹತ್ತು ಗಂಟೆ ಬೇಕಿದ್ದರೆ ಮುಂದೆ ಕೇವಲ ಆರು ಗಂಟೆಯಲ್ಲಿ ತಲುಪಬಹುದು.

೫. ಇದು ಏಳು ಜಿಲ್ಲೆಗಳ ಮೂಲಕ ಸಾಗಿ ಹೋಗಲಿದೆ: ಚಿತ್ರಕೂಟ, ಬಾಂಡಾ, ಮಹೋಬಾ, ಹಮೀರ್‌ಪುರ, ಜಲೌನ್‌, ಔರೈಯಾ ಮತ್ತು ಇಟಾವಾಗಳೇ ಆ ಜಿಲ್ಲೆಗಳು.

೬. ಪ್ರಧಾನಿ ನರೇಂದ್ರ ಮೋದಿ ಅವರು ೨೦೨೦ರ ಫೆಬ್ರವರಿಯಲ್ಲಿ ಈ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಕೇವಲ ೨೮ ತಿಂಗಳಲ್ಲಿ ಇದರ ಕಾಮಗಾರಿ ಮುಕ್ತಾಯಗೊಂಡು ಲೋಕಾರ್ಪಣೆಗೊಂಡಿದೆ.

೭. ಈ ಹೆದ್ದಾರಿ ಸಾಗಿ ಹೋಗುವ ಬಾಂಡಾ ಮತ್ತು ಜಲೌನ್‌ ಜಿಲ್ಲೆಗಳಲ್ಲಿ ಈಗಾಗಲೇ ಕೈಗಾರಿಕಾ ಕಾರಿಡಾರ್‌ ಸ್ಥಾಪನೆಯ ಯೋಜನೆ ಆರಂಭಗೊಂಡಿದೆ.

೮. ಈ ಹೆದ್ದಾರಿ ಯೋಜನೆಯೂ ಪ್ರದೇಶದ ಕೈಗಾರಿಕಾ ಅಭಿವೃದ್ಧಿಗೆ ಹೊಸ ದಿಕ್ಕು ತೋರಲಿದೆ. ಇದರಿಂದ ಸ್ಥಳೀಯ ಯುವಕರಿಗೆ ಒಳ್ಳೆಯ ಉದ್ಯೋಗಾವಕಾಶಗಳನ್ನು ಒದಗಿಸಲಿದೆ.

ಇದನ್ನೂ ಓದಿ| ಮೋದಿ ಸರಕಾರಕ್ಕೆ 8 ವರ್ಷ ಭರ್ತಿ, ಮೋದಿ-ಶಾ ಸಾರ‍ಥ್ಯದಲ್ಲಿ ಬಿಜೆಪಿಯ ಜೈತ್ರಯಾತ್ರೆ

Exit mobile version