ಲಖನೌ: ಭಿಕ್ಷುಕರೆಂದು ನಾವೀಗ ಮೂಗು ಮುರಿಯುವಂತಿಲ್ಲ. ಅವರು ಭಿಕ್ಷುಕರು ಎಂದು ತುಚ್ಛವಾಗಿಯೂ ಕಾಣುವಂತಿಲ್ಲ. ಅದೆಷ್ಟೋ ಭಿಕ್ಷುಕರು ಸಾಕಷ್ಟು ಹಣವಂತರಾಗಿರುತ್ತಾರೆ. ಇತ್ತೀಚೆಗೆ ಒಡಿಶಾದ ಒಬ್ಬರು ಭಿಕ್ಷುಕಿ ತಾನು ಜೀವನಪರ್ಯಂತ ದುಡಿದ ಲಕ್ಷಾಂತರ ರೂಪಾಯಿ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಕೊಟ್ಟು ಸುದ್ದಿಯಾಗಿದ್ದರು. ಇದೀಗ ಉತ್ತರ ಪ್ರದೇಶದಲ್ಲಿ ಭಿಕ್ಷುಕನೊಬ್ಬ ಅಪಘಾತಕ್ಕೀಡಾಗಿ (Road Accident) ದೊಡ್ಡ ಸುದ್ದಿಯಾಗಿದ್ದಾನೆ. ಈತನ ಬಳಿ ಸಿಕ್ಕ ಹಣ ನೋಡಿ ಪೊಲೀಸರೇ ಕಂಗಾಲಾಗಿದ್ದಾರೆ.
ಸಮ್ದಾರ್ ಖುರ್ದ್ ನಿವಾಸಿ, 62 ವರ್ಷದ ಶರೀಫ್ ಬೌಂಕ್ ಒಬ್ಬ ಕಿವುಡ ಮತ್ತು ಮೂಗ ಭಿಕ್ಷುಕ. ಆತನಿಗೆ ಪತ್ನಿ-ಮಕ್ಕಳು-ಮೊಮ್ಮಕ್ಕಳು ಯಾರೂ ಇಲ್ಲ. ಹೀಗಾಗಿ ಅವನು ತನ್ನ ಸೋದರಳಿಯ ಇನಾಯತ್ ಅಲಿ ಎಂಬಾತನೊಂದಿಗೆ ವಾಸವಿದ್ದ. ಏನೂ ಕೆಲಸ ಮಾಡಲು ಸಾಧ್ಯವಾಗದೆ, ಭಟಹತ್ ಪಟ್ಟಣದ ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿ ಭಿಕ್ಷೆ ಬೇಡುತ್ತಿದ್ದ. ಇದು ಆತನ ಪ್ರತಿದಿನದ ಬದುಕಾಗಿತ್ತು. ಶುಕ್ರವಾರ ಶರೀಫ್ಗೆ ಬೈಕ್ ಡಿಕ್ಕಿ ಹೊಡೆಯಿತು. 11 ವರ್ಷದ ಹುಡುಗನೊಬ್ಬ ಬೇಕಾಬಿಟ್ಟಿ ಬೈಕ್ ಚಲಾಯಿಸಿಕೊಂಡು ಬಂದು ವೃದ್ಧ ಶರೀಫ್ಗೆ ಅಪಘಾತ ಮಾಡಿದ್ದ.
ಗಂಭೀರವಾಗಿ ಗಾಯಗೊಂಡು ಬಿದ್ದ ಶರೀಫ್ನನ್ನು ನೋಡಿ, ಸ್ಥಳೀಯರು ಪಿಪ್ರಾಚ್ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಶರೀಫ್ನನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು, ಅಪಘಾತ ಮಾಡಿದ ಹುಡುಗನನ್ನು ವಶಕ್ಕೆ ಪಡೆದರು. ಆಸ್ಪತ್ರೆಯಲ್ಲಿ ಶರೀಫ್ ಹಾಕಿದ್ದ ಅಂಗಿಯ ಜೇಬನ್ನೆಲ್ಲ ತಡಕಾಡಿ, ಪರಿಶೀಲನೆ ಮಾಡಿದಾಗ ಅಲ್ಲಿ ಸಿಕ್ಕ ಹಣ ನೋಡಿ ಪೊಲೀಸರಿಗೇ ಅಚ್ಚರಿಯಾಗಿದೆ. ಶರೀಫ್ ಕಿಸೆಯಲ್ಲಿ ಬರೋಬ್ಬರಿ 3.64 ಲಕ್ಷ (3,64,150) ರೂಪಾಯಿ ಇತ್ತು. ಈಗ ಹೇಳಿ ಆತ ಭಿಕ್ಷುಕನೋ, ಲಕ್ಷಾಧೀಶನೋ?!
ಶರೀಫ್ ಕಾಲು ಮುರಿದಿದೆ. ತಲೆಗೂ ಗಂಭೀರ ಏಟು ಬಿದ್ದಿದೆ. ಆತನನ್ನು ಬಿಆರ್ಡಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಶರೀಫ್ ಬಳಿ ಲಕ್ಷಾಂತರ ರೂಪಾಯಿ ಇದ್ದರೂ, ಅವರ್ಯಾಕೆ ಭಿಕ್ಷೆ ಬೇಡುತ್ತಿದ್ದರು? ಎಂಬುದೇ ಪೊಲೀಸರಿಗೂ, ಸ್ಥಳೀಯರಿಗೂ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಇದನ್ನೂ ಓದಿ: Murder Case | ಐ ಲವ್ ಯೂ ಎಂದವನ ಪರಲೋಕಕ್ಕೆ ಕಳಿಸಿದ ಭಿಕ್ಷುಕ ದಂಪತಿ; ಸಿಕ್ಕಿ ಬಿದ್ದಿದ್ದು ಹೇಗೆ?