ಹೈದರಾಬಾದ್: ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿ, ಸುಪ್ರೀಂ ಕೋರ್ಟ್ ಅಂಗಳ ಪ್ರವೇಶಿಸಿದ ಬೆನ್ನಲ್ಲೇ ತೆಲಂಗಾಣದಲ್ಲೂ ಬುರ್ಖಾ ವಿವಾದ ಭುಗಿಲೆದ್ದಿದೆ. ಬುರ್ಖಾ ಧರಿಸಿ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿಯರನ್ನು ಕಾಲೇಜು ಪ್ರವೇಶಿಸಲು ಆಡಳಿತ ಮಂಡಳಿ ನಿರಾಕರಿಸಿದ್ದು, ವಿದ್ಯಾರ್ಥಿನಿಯರು ಬುರ್ಖಾ ಬಿಚ್ಚಿಟ್ಟ ಬಳಿಕವೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ಪ್ರಕರಣವೀಗ (Burqa Row) ವಿವಾದಕ್ಕೂ ಕಾರಣವಾಗಿದೆ.
ಉರ್ದು ಮಾಧ್ಯಮ ಪದವಿ ಪರೀಕ್ಷೆ ಹಿನ್ನೆಲೆಯಲ್ಲಿ ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಕೆ.ವಿ.ರಂಗಾರೆಡ್ಡಿ ಕಾಲೇಜಿಗೆ ತೆರಳಿದ್ದಾರೆ. ಇದೇ ವೇಳೆ ಕಾಲೇಜಿನ ಸಿಬ್ಬಂದಿಯು ವಿದ್ಯಾರ್ಥಿನಿಯನ್ನು ತಡೆದಿದ್ದಾರೆ. ಬುರ್ಖಾ ಧರಿಸಿ ಬಂದಿರುವ ಕಾರಣ ಪರೀಕ್ಷೆ ಬರೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರ ಮಧ್ಯೆ ವಾದ ನಡೆದಿದೆ. ವಾದ-ಪ್ರತಿವಾದದಲ್ಲಿಯೇ ಅರ್ಧ ಗಂಟೆ ಕಳೆದಿದೆ. ಕೊನೆಗೆ ವಿದ್ಯಾರ್ಥಿನಿಯರು ಬುರ್ಖಾ ಬಿಚ್ಚಿಟ್ಟು ಪರೀಕ್ಷೆ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳು ಹೇಳುವುದೇನು?
#WATCH | Telangana | Girl students who appeared for examination at KV Ranga Reddy College in Santosh Nagar, Hyderabad allege that they were "forced" to take off their burqa before sitting for the exam. (16.06.2023) pic.twitter.com/JHzWP1agsR
— ANI (@ANI) June 17, 2023
ಪ್ರಕರಣದ ಕುರಿತು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾವು ಬುರ್ಖಾ ಧರಿಸಿದ ಕಾರಣ ಕಾಲೇಜು ಪ್ರವೇಶಿಸಲು ಬಿಟ್ಟಿಲ್ಲ. ಅರ್ಧ ಗಂಟೆ ಬಳಿಕ ನಮ್ಮನ್ನು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಬುರ್ಖಾ ಬಿಚ್ಚಿಡುವತನಕವೂ ನಾವು ಪರೀಕ್ಷೆ ಬರೆಯಲು ಬಿಟ್ಟಿಲ್ಲ” ಎಂದು ಮಾಧ್ಯಮಗಳಿಗೆ ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಇನ್ನು ವಿದ್ಯಾರ್ಥಿನಿಯರು ಕಾಲೇಜಿಗೆ ಬುರ್ಖಾ ಧರಿಸಿ ತೆರಳಿದ ಕುರಿತು ಪರ-ವಿರೋಧ ಚರ್ಚೆಗಳು ಶುರುವಾಗಿವೆ.
ಸರಿಯಲ್ಲ ಎಂದ ತೆಲಂಗಾಣ ಸಚಿವ
ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಿಸಿದ ಪ್ರಕರಣ ವಿವಾದಕ್ಕೆ ಕಾರಣವಾಗಿದ್ದು, ವಿವಾದದ ಬೆಂಕಿಗೆ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮೆಹ್ಮೂದ್ ಅಲಿ ತುಪ್ಪ ಸುರಿದಿದ್ದಾರೆ. “ಹೆಣ್ಣುಮಕ್ಕಳು ಎಷ್ಟು ಸಾಧ್ಯವೋ ಅಷ್ಟು ದೇಹವನ್ನು ಬಟ್ಟೆಯಿಂದ ಮುಚ್ಚಿಕೊಂಡು ಬರಬೇಕು. ಹೆಣ್ಣುಮಕ್ಕಳು ತುಂಡು ಬಟ್ಟೆಗಳನ್ನು ಧರಿಸಿದರೆ ತೊಂದರೆಯಾಗುತ್ತದೆ. ನಮ್ಮದು ಜಾತ್ಯತೀತ ನೀತಿಯಾಗಿದೆ. ಯಾರು ಯಾವ ಬಟ್ಟೆ ಬೇಕಾದರೂ ಹಾಕಿಕೊಳ್ಳಬಹುದು. ಹಾಗಂತ ನಾವು ಯುರೋಪ್ ಸಂಸ್ಕೃತಿಯನ್ನು ಪಾಲಿಸಬಾರದು” ಎಂದು ಹೇಳಿದ್ದಾರೆ.