ಬುಲ್ಧಾನ/ಹೊಸದಿಲ್ಲಿ: ಇಂದು ಮುಂಜಾನೆ ಮಹಾರಾಷ್ಟ್ರದ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುತ್ತಿದ್ದ ಬಸ್ ಅಪಘಾತದಲ್ಲಿ (Road Accident) ಬಸ್ಸಿಗೆ ಬೆಂಕಿ (Bus burnt) ಹೊತ್ತಿಕೊಂಡು, ಮೂವರು ಮಕ್ಕಳು ಸೇರಿದಂತೆ ಕನಿಷ್ಠ 26 ಜನರು ಬೆಂಕಿಗೆ ಆಹುತಿಯಾಗಿದ್ದಾರೆ. ಕನಿಷ್ಠ ಎಂಟು ಜನ ಗಾಯಗೊಂಡಿದ್ದಾರೆ.
ಸಮೃದ್ಧಿ- ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಪುಣೆಗೆ ತೆರಳುತ್ತಿದ್ದ ಬಸ್‌ನಲ್ಲಿ ಸುಮಾರು 33 ಜನರು ಪ್ರಯಾಣಿಸುತ್ತಿದ್ದರು. ಮಧ್ಯರಾತ್ರಿ 1.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಕ್ಸ್‌ಪ್ರೆಸ್ ವೇಯಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಬಸ್ ಟಯರ್ ಸ್ಫೋಟಗೊಂಡು ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಬದುಕುಳಿದಿರುವ ಬಸ್ ಚಾಲಕ, ಟೈರ್ ಒಡೆದ ನಂತರ ಬಸ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದರು.
ಅಪಘಾತದಲ್ಲಿ 25 ಜನರು ಸುಟ್ಟು ಕರಕಲಾಗಿದ್ದು, ಬಸ್ ಚಾಲಕ ಸೇರಿದಂತೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬುಲ್ಧಾನದ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಕಡಸನೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: Road Accident : ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ಕಲಬುರಗಿಯ 7 ಮಂದಿ ಮೃತ್ಯು