Site icon Vistara News

Maharashtra Bus Tragedy: ಬೆಂಕಿ ಬೀಳುತ್ತಿದ್ದಂತೆ ಬಸ್​ ಕಿಟಕಿ ಒಡೆದು ಪಾರಾದೆವು ಎಂದ ಪ್ರಯಾಣಿಕ

Burnt Bus

ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಿಂಧಖೇಡ್ರಾಜ ಬಳಿ ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಬಸ್​ ಬೆಂಕಿಗಾಹುತಿಯಾಗಿ (Maharashtra Bus Tragedy), 26 ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಪಾರಾದ ಪ್ರಯಾಣಿಕರೊಬ್ಬರು ಸಂದರ್ಭವನ್ನು ವಿವರಿಸಿದ್ದಾರೆ. ಬಸ್​ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ನಾವೊಂದು ಎರಡು ಮೂರು ಜನ ಪ್ರಯಾಣಿಕರು ಬಸ್​​ನ ಕಿಟಕಿ ಒಡೆದುಕೊಂಡು, ಹೊರಗೆ ಹಾರಿ ಜೀವ ಉಳಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಅಂದಹಾಗೇ, ಈ ಬಸ್​ ನಾಗ್ಪುರದಿಂದ ಪುಣೆಗೆ ಹೋಗುತ್ತಿತ್ತು. 33 ಪ್ರಯಾಣಿಕರು ಇದ್ದರು. ತಡರಾತ್ರಿ 1.30ರ ಹೊತ್ತಿಗೆ ಡಿವೈಡರ್​ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿ ಉರಿದಿದೆ. 26 ಮಂದಿ ಸಜೀವ ದಹನವಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಎರಡು-ಮೂರು ಜನ ಮಾತ್ರ ಪಾರಾಗಿದ್ದಾರೆ.

ಇದನ್ನೂ ಓದಿ: Bus burnt: ಮಹಾರಾಷ್ಟ್ರದ ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್ಸು ಬೆಂಕಿಗಾಹುತಿ, ನಿದ್ರಿಸುತ್ತಿದ್ದ 25 ಪ್ರಯಾಣಿಕರು ಸ್ಥಳದಲ್ಲೇ ಭಸ್ಮ

‘ಡಿವೈಡರ್​ಗೆ ಡಿಕ್ಕಿಯಾಗುತ್ತಿದ್ದಂತೆ ಬಸ್​​ನ ಟೈಯರ್​ ಸ್ಫೋಟಗೊಂಡಿತು. ತತ್​​ಕ್ಷಣವೇ ಇಡೀ ಬಸ್​ಗೆ ಬೆಂಕಿ ತಗುಲಿತು. ಇಡೀ ಬಸ್​ಗೆ ಬೆಂಕಿ ಪಸರಿಸಿತು. ನಾನು ಮತ್ತು ನನ್ನ ಪಕ್ಕ ಕುಳಿತಿದ್ದವರು ಕೂಡಲೇ ಬಸ್​ನ ಹಿಂಬದಿಗೆ ಓಡಿ, ಕಿಟಕಿ ಗಾಜು ಒಡೆದವು. ಅಲ್ಲಿಂದಲೇ ಹಾರಿದೆವು’ ಎಂದು ಈ ಪ್ರಯಾಣಿಕ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಕೆಲವೇ ಸಮಯದಲ್ಲಿ ಅಲ್ಲಿಗೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದಾರೆ. ಜನರನ್ನು ರಕ್ಷಣೆ ಮಾಡಲು ಪ್ರಯತ್ನ ಮಾಡಲಾಯಿತು. ಆದರೂ ಬೆಂಕಿಯ ತೀವ್ರತೆ ಜಾಸ್ತಿ ಇದ್ದಿದ್ದರಿಂದ 26 ಮಂದಿಯೂ ಸಜೀವ ದಹನಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಬಸ್​ ಅಪಘಾತವಾದಾಗ ಎಲ್ಲರೂ ಸವಿನಿದ್ದೆಯಲ್ಲಿ ಇದ್ದರು. ಡಿಕ್ಕಿಯಾದಾಗ ಎಚ್ಚರವಾಯಿತು. ಆದರೆ ಅಷ್ಟರಲ್ಲಿ ಬೆಂಕಿ ಕೆನ್ನಾಲಿಗೆ ಚಾಚಿತ್ತು. ಪ್ರತಿಯೊಬ್ಬರೂ ತಮ್ಮ ಪಕ್ಕದ ಕಿಟಕಿಯನ್ನು ಒಡೆಯಲು ಇನ್ನಿಲ್ಲದಂತೆ ಪ್ರಯತ್ನ ಪಟ್ಟರು. ಆದರೆ ಅದು ಸಾಧ್ಯವಾಗಲಿಲ್ಲ. ಬಸ್​​ನೊಳಗೇ ನೂಕುನುಗ್ಗಲು, ಆಕ್ರಂದನ ಶುರುವಾಗಿಬಿಟ್ಟಿತ್ತು. ಒಂದಷ್ಟು ವಾಹನಗಳು ಅದೇ ಮಾರ್ಗದಲ್ಲಿ ಹೋಗುತ್ತಿದ್ದವು. ಆದರೆ ಒಬ್ಬರೂ ನಿಲ್ಲಿಸಿ, ಉರಿಯುತ್ತಿದ್ದ ಬಸ್​​ನಲ್ಲಿ ಇದ್ದವರ ಸಹಾಯಕ್ಕೆ ಬರಲಿಲ್ಲ‘ ಎಂದೂ ಆ ಪಾರಾದ ಪ್ರಯಾಣಿಕ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಾವು ಬಸ್​ನಿಂದ ಪಾರಾದರೂ, ನಮಗೆ ಆ ಉರಿಯುತ್ತಿದ್ದ ಬಸ್​ಗಳು, ದಹಿಸುತ್ತಿದ್ದ ಮೃತದೇಹಗಳನ್ನು ನೋಡಿ ಕಣ್ಣಲ್ಲಿ ನೀರು ಬರುತ್ತಿತ್ತು ಎಂದಿದ್ದಾರೆ.

Exit mobile version