Site icon Vistara News

ಹೆಂಡತಿಯನ್ನು ದಿಲ್ಲಿಯ Wife swapping ಪಾರ್ಟಿಗಳಿಗೆ ಬಲವಂತವಾಗಿ ಕರೆದೊಯ್ಯುತ್ತಿದ್ದ ಉದ್ಯಮಿ!

woman in distress

ಮುಝಫ್ಫರ್‌ ನಗರ(ಉತ್ತರ ಪ್ರದೇಶ): ಜಗತ್ತಿನಲ್ಲಿ ಎಂಥೆಂಥ ವಿಕ್ಷಿಪ್ತರು ಇರುತ್ತಾರೆ ಎನ್ನುವುದಕ್ಕೆ ನಿದರ್ಶನವಾಗಿ ಇಲ್ಲೊಬ್ಬ ವಿಕೃತ ಕಾಮುಕ ಉದ್ಯಮಿ ಇದ್ದಾನೆ. ಈಗ ತಾನು ಕೈ ಹಿಡಿದ ಹೆಂಡತಿಯನ್ನೇ ವೈಫ್‌ ಸ್ವಾಪಿಂಗ್‌ (Wife swapping- ಪತ್ನಿ ವಿನಿಮಯ) ಪಾರ್ಟಿಗಳಿಗೆ ಬಲವಂತವಾಗಿ ಕರೆದೊಯ್ಯುತ್ತಿದ್ದ. ಸಾಲದ್ದಕ್ಕೆ ತನ್ನ ಸೋದರನ ಜತೆಗೇ ದೈಹಿಕ ಸಂಬಂಧ ಇಟ್ಟುಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದ!

ಉತ್ತರ ಪ್ರದೇಶದ ಮುಝಫ್ಫರ್‌ ನಗರದ ನ್ಯೂ ಮಂಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣ ನಿಜಕ್ಕೂ ಭಯಾನಕವಾಗಿದೆ.

ಅವನು ಗುರುಗ್ರಾಮದಲ್ಲಿ ಉದ್ಯಮಿ. ಇವಳು ಮುಝಫ್ಫರ್‌ ನಗರದವಳು. ಅವರಿಬ್ಬರ ಮದುವೆ ನಡೆದಿದ್ದು ೨೦೨೧ರ ಜೂನ್‌ನಲ್ಲಿ. ಆ ಅಸಾಮಿ ಅದೆಷ್ಟು ಧೂರ್ತನೆಂದರೆ ಮದುವೆಯಾದ ಕೆಲವೇ ಸಮಯದಲ್ಲಿ ತನ್ನ ವಿಕೃತ ಬುದ್ಧಿಯನ್ನು ತೋರಿಸಲು ಆರಂಭಿಸಿದ್ದ. ಹೆಂಡತಿಯನ್ನು ದಿಲ್ಲಿಯ ವೈಪ್‌ ಸ್ವಾಪಿಂಗ್‌ ಪಾರ್ಟಿಗಳಿಗೆ ಬಲವಂತವಾಗಿ ಕರೆದೊಯ್ಯುತ್ತಿದ್ದ. ಅಲ್ಲಿ ಅನ್ಯ ಪುರುಷರ ಜತೆ ದೈಹಿಕ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ ಎಂದು ಆಕೆ ನ್ಯೂಮಂಡಿ ಸ್ಟೇಷನ್‌ಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ʻʻನಾನು ಯಾವ ಕಾರಣಕ್ಕೂ ಇಂಥ ಪಾರ್ಟಿಗಳಿಗೆ ಬರುವುದಿಲ್ಲ ಎಂದು ಹೇಳುತ್ತಿದ್ದೆ. ಆದರೆ ಅವನು ಬಲವಂತ ಮಾಡುತ್ತಿದ್ದ. ನಿರಾಕರಿಸಿದರೆ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ. ಲೈಂಗಿಕ ದೌರ್ಜನ್ಯ ಮಾಡುತ್ತಿದ್ದ. ಕಳೆದ ಏಪ್ರಿಲ್‌ ೨೪ರಂದು ನಾನು ತಪ್ಪಿಸಿಕೊಂಡು ಗುರುಗ್ರಾಮದ ಪೊಲೀಸ್‌ ಠಾಣೆಗೆ ದೂರು ನೀಡಲು ಹೋಗಿದ್ದೆ. ಆದರೆ, ನನ್ನ ಗಂಡನ ಗೂಂಡಾಗಳು ದಾರಿ ಮಧ್ಯೆಯೇ ತಡೆದರು. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಸಿದರುʼʼ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇಷ್ಟೇ ಅಲ್ಲ, ತನ್ನ ಸಹೋದರನ ಜತೆಗೇ ದೈಹಿಕ ಸಂಬಂಧ ಹೊಂದುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.

ನಿಜವೆಂದರೆ, ಈ ಮಹಿಳೆ ದೂರು ನೀಡಿದ್ದು ಪೊಲೀಸ್‌ ಠಾಣೆಗಲ್ಲ. ಮುಝಫ್ಫರ್‌ ನಗರದ ಹೆಚ್ಚುವರಿ ಮುಖ್ಯ ನ್ಯಾಯಾಧೀಶರ ಮೊದಲ ಕೋರ್ಟ್‌ಗೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ನ್ಯಾಯಾಧೀಶರು ಕೂಡಲೇ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದರು. ಅದರನ್ವಯ ನ್ಯೂಮಂಡಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ.

ʻʻನಾವು ಮಹಿಳೆಯ ಗಂಡ ಮತ್ತು ಆತ ಸೋದರನ ವಿರುದ್ಧ ಕೇಸು ದಾಖಲಿಸಿಕೊಂಡದ್ದೇವೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ ೩೭೬(ಅತ್ಯಾಚಾರ), ೩೦೭ (ಕೊಲೆ ಯತ್ನ) ೩೨೩ (ಗಾಯ ಉಂಟು ಮಾಡಿದ್ದಕ್ಕೆ ಶಿಕ್ಷೆ), ೫೪೦ (ಶಾಂತಿ ಭಂಗಕ್ಕೆ ಉತ್ತೇಜನ ನೀಡಲು ಉದ್ದೇಶಪೂರ್ವಕವಾಗಿ ಅಪಮಾನ), ೫೦೬( ಅಪರಾಧದ ಉದ್ದೇಶದಿಂದ ಮಾಡುವ ಕೃತ್ಯ) ಸೆಕ್ಷನ್‌ಗಳಡಿ ಕೇಶೂ ದಾಖಲಿಸಿಕೊಂಡಿದ್ದೇವೆ. ಪ್ರಕರಣದ ಗುರುಗ್ರಾಮದಲ್ಲಿ ನಡೆದಿರುವುದರಿಂದ ಅಲ್ಲಿ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಿದ್ದೇವೆʼʼ ಎಂದು ನ್ಯೂ ಮಂಡಿ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಸುನಿಲ್‌ ಕುಮಾರ್‌ ಸೈನಿ ಹೇಳಿದ್ದಾರೆ.

ಅಂದ ಹಾಗೆ, ಈ ಮಹಿಳೆ ಆ ಉದ್ಯಮಿಯ ಎರಡನೇ ಹೆಂಡತಿ.

ಇದನ್ನೂ ಓದಿ| ಮನೆ ಪಾಠಕ್ಕೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ ಪ್ರಾಧ್ಯಾಪಕ, ವಿದ್ಯಾರ್ಥಿನಿ ಗರ್ಭಿಣಿ

Exit mobile version