Site icon Vistara News

ದೇಶದಲ್ಲಿ ಇದೆ ಮತ್ತೊಂದು ತಾಜ್​ ಮಹಲ್​; ಅಮ್ಮನಿಗಾಗಿ ಮಗ ಕಟ್ಟಿಸಿದ್ದು, ನೀವೂ ಭೇಟಿ ಕೊಡಬಹುದು

Businessman Builds Miniature Taj Mahal for his Mother In Tamil Nadu

#image_title

ನವ ದೆಹಲಿ: ಭಾರತದ ಪಾರಂಪರಿಕ ಸ್ಮಾರಕದ ಸಾಲಿನಲ್ಲಿರುವ, ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ತಾಜ್​ಮಹಲ್​ ಪ್ರೇಮಿಗಳ ಪಾಲಿನ ದ್ಯೋತಕವಾಗಿದೆ. ತಾಜ್​ಮಹಲ್ (Taj Mahal)​ ನೋಡಬೇಕು, ಅದರ ಎದುರಿಗೆ ತಮ್ಮ ಪ್ರಿಯತಮೆ/ಪ್ರಿಯಕರನಿಗೆ ಪ್ರಪೋಸ್ ಮಾಡಬೇಕು ಎಂದು ಪ್ರೇಮಿಗಳು ಕನಸು ಕಾಣುತ್ತಾರೆ. ಅಲ್ಲಿಗೆ ಹೋಗುತ್ತಾರೆ. ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ಮೊಘಲ್ ದೊರೆ ಷಹಜಹಾನ್ ತನ್ನ ಪ್ರೀತಿಯ ಪತ್ನಿ ಮುಮ್ತಾಜ್​ಗಾಗಿ ಈ ತಾಜ್​ ಮಹಲ್​ ಕಟ್ಟಿಸಿದ ಎಂಬುದನ್ನು ಇತಿಹಾಸ ಹೇಳಿದೆ. ಇದೇ ಕಾರಣಕ್ಕೀಗ ತಾಜ್​ ಮಹಲ್ ಎಂದರೆ ಗಂಡ-ಹೆಂಡತಿಯ, ಪ್ರೇಮಿಗಳ ‘ಪ್ರೀತಿ’ ಎಂಬ ಭಾವನೆ ಬಲವಾಗಿದೆ.

ಆದರೆ ತಮಿಳುನಾಡಿನ ಚೆನ್ನೈನ ಉದ್ಯಮಿಯೊಬ್ಬರು ತಮ್ಮ ತಾಯಿಯ ನೆನಪಿನಲ್ಲಿ ಒಂದು ಪುಟ್ಟದಾದ ತಾಜ್​ ಮಹಲ್​ ಕಟ್ಟಿಸಿದ್ದಾರೆ. ಅಮ್ಮನನ್ನು ವಿಪರೀತವಾಗಿ ಪ್ರೀತಿಸುತ್ತಿದ್ದ ಅವರು, ತಮಿಳುನಾಡಿನ ತಿರುವರೂರ್​​ನಲ್ಲಿ, 1 ಎಕರೆ ಪ್ರದೇಶದಲ್ಲಿ, 5 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕ್ಕದಾದ ತಾಜ್​ ಮಹಲ್​ ಕಟ್ಟುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇವರ ಕಥೆ ಮನಮಿಡಿಯುವಂತೆ ಇದೆ..

ಅಬ್ದುಲ್​ ಖಾದರ್​ ಶೇಖ್​ ದಾವೂದ್​ ಮತ್ತು ಜೈಲಾನಿ ಬೀವಿ ದಂಪತಿಗೆ ಒಟ್ಟು ಐವರು ಮಕ್ಕಳು. ಅದರಲ್ಲಿ ಅಮರುದ್ದೀನ್​ ಶೇಖ್​ ದಾವೂದ್​ ಸಾಹೀಬ್​ ಮಗ. ಇನ್ನು ನಾಲ್ವರೂ ಹೆಣ್ಣುಮಕ್ಕಳು. ಅಬ್ದುಲ್ ಖಾದರ್ ಶೇಖ್​ ದಾವೂದ್​ ಉದ್ಯಮಿಯಾಗಿದ್ದರು. ಮಕ್ಕಳೆಲ್ಲ ತುಂಬ ಚಿಕ್ಕವರು ಇರುವಾಗಲೇ ತೀರಿಹೋದರು. ಆಗ ಜೈಲಾನಿ ಬೀವಿ ಒಬ್ಬರೇ ನಿಂತು ಐವರೂ ಮಕ್ಕಳನ್ನು ಬೆಳೆಸಿದರು. ಹೋರಾಟದ ಬದುಕಾಗಿತ್ತು. ಸಾಲುಸಾಲು ಸಮಸ್ಯೆಗಳು ಇದ್ದವು. ಅವುಗಳನ್ನೆಲ್ಲ ಮೆಟ್ಟಿನಿಂತು, ಧೈರ್ಯದಿಂದ ಮಕ್ಕಳನ್ನು ಚೆನ್ನಾಗಿ ಬೆಳೆಸಿದ್ದರು. ಅಮರುದ್ದೀನ್​ ಶೇಖ್​ ದಾವೂದ್​ ಕೂಡ ಉದ್ಯಮಿಯಾಗಿ ಬೆಳೆದರು. ನಾಲ್ವರೂ ಹೆಣ್ಣುಮಕ್ಕಳಿಗೆ ಮದುವೆಯಾಗಿ, ಅವರು ಜೀವನದಲ್ಲಿ ಸೆಟ್ಲ್​ ಆದ ಮೇಲೆ ಅಮರುದ್ದೀನ್ ಕೂಡ ಮದುವೆಯಾದರು. ಅಮ್ಮ-ಪತ್ನಿಯೊಂದಿಗೆ ಸುಖವಾಗಿಯೇ ಇದ್ದರು. ಆದರೆ…

ಇದನ್ನೂ ಓದಿ: Viral Video: ತಾಜ್​ಮಹಲ್​, ಕುತುಬ್​ ಮಿನಾರ್​ಗಳನ್ನು ನೆಲಸಮಗೊಳಿಸಿ, ಷಹಜಹಾನ್​​ ಪ್ರೀತಿಯನ್ನು ತನಿಖೆ ಮಾಡಿ; ಬಿಜೆಪಿ ಶಾಸಕನ ಆಗ್ರಹ

2020ರಲ್ಲಿ, ಒಂದು ಅಮಾವಾಸ್ಯೆ ದಿನ ಜೈಲಾನಿ ಬೀವಿ ನಿಧನರಾದರು. ಇದು ಅಮರುದ್ದೀನ್ ಪಾಲಿಗೆ ದೊಡ್ಡ ಶಾಕ್​ ಆಗಿತ್ತು. ಆ ನೋವಿನಿಂದ ಹೊರಬರಲು ಸಾಧ್ಯವಾಗದೆ ಅವರು ಒದ್ದಾಡಿಬಿಟ್ಟರು. ಪ್ರೀತಿಯ ಅಮ್ಮನ ಸ್ಮರಣಾರ್ಥ ಪ್ರತಿ ಅಮಾವಾಸ್ಯೆಯ ದಿನವೂ ಅವರು 1000 ಜನರಿಗೆ ಬಿರ್ಯಾನಿ ವಿತರಿಸಿ, ಅವರ ಹಸಿವು ನೀಗಿಸಲು ಶುರು ಮಾಡಿದರು. ಆದರೆ ಅವರಿಗೆ ಅಷ್ಟಕ್ಕೇ ಸಮಾಧಾನ ಸಿಗುತ್ತಿರಲಿಲ್ಲ. ಅಮ್ಮನ ನೆನಪಿಗಾಗಿ ಶಾಶ್ವತವಾಗಿ ಏನಾದರೂ ಕಟ್ಟಿಸಬೇಕು ಎಂಬ ಮಹದಾಸೆ ಅವರ ಮನಸಲ್ಲಿ ಗಟ್ಟಿಯಾಗಿ ನೆಲೆನಿಂತಿತ್ತು. ಕೊನೆಗೂ ಅಮರುದ್ದೀನ್​ ಅವರು ತಮಿಳುನಾಡಿನ ತಿರುವರೂರ್​​ನಲ್ಲಿರುವ ತಮ್ಮ ಪೂರ್ವಜರ ಹಳ್ಳಿಯಾದ ಅಮ್ಮಯ್ಯಪ್ಪನ್​​ನಲ್ಲಿ ಪುಟ್ಟದಾದ ತಾಜ್​​ಮಹಲ್​ ಕಟ್ಟಿಸಿದ್ದಾರೆ.

ಈ ಸಣ್ಣದಾದ ತಾಜ್​ಮಹಲ್​ ಕಟ್ಟಲು ಅವರು ರಾಜಸ್ಥಾನದಿಂದ ಅಮೃತಶಿಲೆ ತರಿಸಿದ್ದರು. ಅಲ್ಲಿನ ಕೆಲಸಗಾರರನ್ನೇ ಕರೆದುಕೊಂಡು ಬಂದಿದ್ದರು. ಸಾಕಷ್ಟು ಹಣ ಖಷ್ಟು ಮಾಡಿ, ಒಂದು ಸುಂದರವಾದ ಮಿನಿ ತಾಜ್​ಮಹಲ್ ನಿರ್ಮಾಣ ಮಾಡಿದ್ದಾರೆ. ಮಗ, ಅಮ್ಮನಿಗಾಗಿ ಕಟ್ಟಿಸಿದ ತಾಜ್​ಮಹಲ್​ ಸಾರ್ವಜನಿಕರ ವೀಕ್ಷಣೆಗೆ ಇದೇ ವರ್ಷ ಜೂನ್​ 2ರಿಂದ ಮುಕ್ತವಾಗಿದೆ.

Exit mobile version