ನವದೆಹಲಿ: ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಬಿ.ವಿ.ಆರ್.ಸುಬ್ರಹ್ಮಣ್ಯಂ (BVR Subrahmanyam) ಅವರನ್ನು ಕೇಂದ್ರ ಸರ್ಕಾರ ಸೋಮವಾರ ನೇಮಕ ಮಾಡಿದೆ. ಪರಮೇಶ್ವರನ್ ಅಯ್ಯರ್ (Parameswaran lyer) ಅವರು ವಿಶ್ವಬ್ಯಾಂಕ್ (World Bank) ಕಾರ್ಯಕಾರಿ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಬ್ರಹ್ಮಣ್ಯಂ ಅವರನ್ನು ಸಿಇಒ ಆಗಿ ನೇಮಿಸಿದೆ.
“ಸಂಪುಟದ ನೇಮಕಾತಿ ಸಮಿತಿಯು ಸುಬ್ರಹ್ಮಣ್ಯಂ ಅವರನ್ನು ಎರಡು ವರ್ಷದ ಅವಧಿಗೆ ಸಿಇಒ ಆಗಿ ನೇಮಿಸಲು ಅನುಮೋದನೆ ನೀಡಿದೆ. ಅಧಿಕಾರ ವಹಿಸಿಕೊಂಡ ದಿನದಿಂದ ಎರಡು ವರ್ಷ ಸುಬ್ರಹ್ಮಣ್ಯಂ ಅವರು ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ” ಎಂದು ಸಿಬ್ಬಂದಿ ಸಚಿವಾಲಯ ತಿಳಿಸಿದೆ. ಸದ್ಯ, ಪರಮೇಶ್ವರನ್ ಅಯ್ಯರ್ ಅವರೇ ಸಿಇಒ ಆಗಿದ್ದು, ಅವರು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ವಿಶ್ವ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ವಿಶ್ವಬ್ಯಾಂಕ್ ಕಾರ್ಯಕಾರಿ ನಿರ್ದೇಶಕರಾಗಿ ಮೂರು ವರ್ಷ ಕಾರ್ಯನಿರ್ವಹಿಸಲಿದ್ದಾರೆ.
ಬಿ.ವಿ.ಆರ್.ಸುಬ್ರಹ್ಮಣ್ಯಂ ನೇಮಕದ ಆದೇಶ
ಇದನ್ನೂ ಓದಿ: PLI Scheme: ಫಲ ನೀಡುತ್ತಿರುವ ಪಿಎಲ್‌ಐ ಯೋಜನೆ, 45,000 ಕೋಟಿ ರೂ. ಹೂಡಿಕೆ, 3 ಲಕ್ಷ ಉದ್ಯೋಗ ಸೃಷ್ಟಿ: ನೀತಿ ಆಯೋಗ
೧೯೮೭ರ ಛತ್ತೀಸ್‌ಗಢ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಬಿ.ವಿ.ಆರ್.ಸುಬ್ರಹ್ಮಣ್ಯಂ ಅವರು ಆಂತರಿಕ ಭದ್ರತೆ ವಿಷಯದಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಇವರು ಛತ್ತೀಸ್‌ಗಢ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ, ೨೦೦೪-೨೦೦೮ರವರೆಗೆ ಆಗ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಅವರಿಗೆ ಖಾಸಗಿ ಕಾರ್ಯದರ್ಶಿ ಸೇರಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ.