Site icon Vistara News

‘ಫೆಮಾ’ ಉಲ್ಲಂಘಿಸಿದ ಬೈಜುಸ್‌ಗೆ 9000 ಕೋಟಿ ರೂ. ಪಾವತಿಸಲು ಇಡಿ ನೋಟಿಸ್!

Byjus gets notice from ED to Pay RS 9000 crore

ನವದೆಹಲಿ: ಫೆಮಾ ನಿಯಮಗಳನ್ನು (FEMA Rules) ಉಲ್ಲಂಘಿಸಿದ ಬೈಜುಸ್ ಕಂಪನಿಗೆ (Byju’s Company) 9000 ಕೋಟಿ ರೂಪಾಯಿ ಪಾವತಿಸುವಂತೆ ಜಾರಿ ನಿರ್ದೇಶನಾಲಯವು (Enforcement Directorate) ನೋಟಿಸ್ ನೀಡಿದೆ (ED Notice) ಎಂದು ಮೂಲಗಳು ತಿಳಿಸಿವೆ. ಆದರೆ, ಕಂಪನಿಯು ಮಾತ್ರ ಅಧಿಕಾರಿಗಳಿಂದ ಇಂಥ ಯಾವುದೇ ಸಂವಹನಗಳು ನಡೆದಿಲ್ಲ ಎಂದು ಕಂಪನಿಯು ಹೇಳಿದೆ.

ಮೂಲಗಳ ಪ್ರಕಾರ, 2011 ಮತ್ತು 2023 ಅವಧಿಯ ನಡುವೆ ಬೈಜುಸ್ ಕಂಪನಿಯು 28 ಸಾವಿರ ಕೋಟಿ ರೂ. ವಿದೇಶಿ ನೇರ ಬಂಡವಾಳ ಹೂಡಿಕೆಯ ಮೂಲಕ ಪಡೆದುಕೊಂಡಿದೆ. ಇದೇ ಅವಧಿಯಲ್ಲಿ ವಿದೇಶಿಗಳಿಗೆ ಸಾಗರೋತ್ತರ ನೇರ ಬಂಡವಾಳ ಹೆಸರಿನಲ್ಲಿ ಸುಮಾರು 9,754 ಕೋಟಿ ಹಣವನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಇಡಿ ನೋಟಿಸ್ ಅಲ್ಲಗಳೆದ ಬೈಜುಸ್ ಕಂಪನಿ

ಆದರೆ, ಈ ಸುದ್ದಿಯನ್ನು ಅಲ್ಲಗಳೆದಿರುವ ಬೈಜುಸ್ ಎಕ್ಸ್ ವೇದಿಕೆಯಲ್ಲಿ, ಈ ರೀತಿಯ ಯಾವುದೇ ನೋಟಿಸ್ ಪಡೆದುಕೊಂಡಿಲ್ಲ ಎಂದು ಹೇಳಿದೆ. ಫೆಮಾ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಮಾಧ್ಯಮಗಳ ವರದಿಯನ್ನು ಬೈಜುಸ್ ಸಂಪೂರ್ಣವಾಗಿ ತಳ್ಳಿ ಹಾಕುತ್ತದೆ. ಅಧಿಕಾರಿಗಳಿಂದ ಈ ಕುರಿತಾದ ಯಾವುದೇ ನೋಟಿಸ್ ಪಡೆದುಕೊಂಡಿಲ್ಲ ಎಂದು ಹೇಳಿದೆ.

ಬೈಜುಸ್ ಪೋಷಕ ಕಂಪನಿಯಾಗಿರುವ ಥಿಂಕ್ ಆ್ಯಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಅನ್ನು ಎಂಜಿನಿಯರ್‌ ಮತ್ತು ಶಿಕ್ಷಕರಾದ ಬೈಜು ರವೀಂದ್ರನ್ ಮತ್ತು ಅವರ ಪತ್ನಿ ದಿವ್ಯಾ ಗೋಕುಲನಾಥ್ ಅವರು 2011ರಲ್ಲಿ ಸ್ಥಾಪಿಸಿದರು. ಆರಂಭದಲ್ಲಿ, ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್ ಕಲಿಕಾ ಕಾರ್ಯಕ್ರಮಗಳನ್ನು ಒದಗಿಸುತ್ತಿದ್ದರು.

2015ರಲ್ಲಿ ಕಂಪನಿಯು ಬೈಜುಸ್ ಲರ್ನಿಂಗ್ ಆ್ಯಪ್ ಲಾಂಚ್ ಮಾಡಿತು. ಇಲ್ಲಿಂದ ಅವರು ಅತಿ ವೇಗವಾಗಿ ಬೆಳವಣಿಗೆಯನ್ನು ಕಾಣಲಾರಂಭಿಸಿದರು. ಎರಡು ವರ್ಷಗಳ ನಂತರ ಮಕ್ಕಳು ಮತ್ತು ಪೋಷಕರಿಗೆ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಅನುಕೂಲವಾಗುವ ಮ್ಯಾಥ್ ಆ್ಯಪ್ ಲಾಂಚ್ ಮಾಡಿದರು.

2018ರ ಹೊತ್ತಿಗೆ ಬೈಜುಸ್ 1.5 ಕೋಟಿ ಬಳಕೆದಾರರನ್ನು ಹೊಂದಿದ್ದು, ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಮನೆಗಳನ್ನು ತಲುಪಿತ್ತು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗಳು ಮುಚ್ಚಲ್ಪಟ್ಟಾಗ ಮತ್ತು ಮಕ್ಕಳು ಡಿಜಿಟಲ್ ಶಿಕ್ಷಣದ ವಿಧಾನಕ್ಕೆ ಬದಲಾಯಿಸಬೇಕಾದಾಗ ಅಪ್ಲಿಕೇಶನ್‌ನ ಜನಪ್ರಿಯತೆಯು ಭಾರಿ ಉತ್ತೇಜನವನ್ನು ಪಡೆದುಕೊಂಡಿತು.

ಈ ಸುದ್ದಿಯನ್ನೂ ಓದಿ: BYJU’s India: ಬೈಜೂಸ್ ಇಂಡಿಯಾ ಸಿಇಒ ಮೃಣಾಲ್ ಮೋಹಿತ್ ರಾಜೀನಾಮೆ

Exit mobile version