Site icon Vistara News

BYJU’s Layoffs: ಮತ್ತೆ 5500 ಉದ್ಯೋಗ ಕಡಿತಕ್ಕೆ ಮುಂದಾದ ಬೈಜೂಸ್ ಕಂಪನಿ

Byjus gets notice from ED to Pay RS 9000 crore

ನವ ದೆಹಲಿ: ಭಾರತದ ಜನಪ್ರಿಯ ಎಜ್ಯು ಟೆಕ್‌ (edu tech) ಬೈಜೂಸ್‌ ಸುಮಾರು 5,500 ಉದ್ಯೋಗ ಕಡಿತಕ್ಕೆ ಮುಂದಾಗಿದೆ (BYJU’s Layoffs). ವೆಚ್ಚವನ್ನು ಕಡಿಮೆ ಮಾಡಲು ಈ ಕಠಿಣ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಬೈಜೂಸ್‌ ತನ್ನ ವ್ಯವಹಾರವನ್ನು ಪುನರ್‌ ರಚಿಸಲು ಮುಂದಾಗಿರುವ ನಡುವೆಯೇ ಈ ಮಹತ್ವದ ಬೆಳವಣಿಗೆ ಕಂಡುಬಂದಿದೆ.

ಕಂಪೆನಿಯ ಭಾರತದ ಸಿಇಒ ಅರ್ಜುನ್‌ ಮೋಹನ್‌ ಮಾತನಾಡಿ, ಹಲವು ವ್ಯವಹಾರಗಳನ್ನು ವಿಲೀನಗೊಳಿಸಲಾಗುವುದು ಎಂದು ಹೇಳಿದ್ದಾರೆ. ಈ ವಾರದ ಕೊನೆಯಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಉದ್ಯೋಗ ಕಡಿತವನ್ನು ಬೈಜು ಮಾತೃಸಂಸ್ಥೆಯಾದ ಥಿಂಕ್ & ಲರ್ನ್ ನಲ್ಲಿ (Think & Learn) ಮಾತ್ರ ಜಾರಿಗೆ ತರಲಾಗುತ್ತಿದೆ ಮತ್ತು ಅದರ ಯಾವುದೇ ಅಂಗಸಂಸ್ಥೆಗಳ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಕೆಲವು ಸೀನಿಯರ್‌ ಉದ್ಯೋಗಿಗಳಿಗೂ ಈ ಬೆಳವಣಿಗೆ ಹೊಡೆತ ನೀಡುವ ಸಾಧ್ಯತೆ ಇದೆ.

ಬೈಜೂಸ್ ಹೆಚ್ಚಿನ ವಿದ್ಯಾರ್ಥಿಗಳನ್ನು ತನ್ನ ಆಫ್‌ಲೈನ್‌ ಕೇಂದ್ರಗಳಿಗೆ ಕರೆ ತರುವ ಗುರಿ ಹೊಂದಿದೆ. ಕಳೆದ ವರ್ಷ 22 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದ ಈ ಸಂಸ್ಥೆಯು ತನ್ನ ಲೆಕ್ಕಪರಿಶೋಧಕ ಮತ್ತು ಮಂಡಳಿಯ ಸದಸ್ಯರು ರಾಜೀನಾಮೆ ನೀಡುವುದು ಸೇರಿದಂತೆ ಹಲವು ಬೆಳವಣಿಗೆಗಳಿಂದ ಹಿನ್ನಡೆ ಅನುಭವಿಸಿದೆ. ಕಳೆದ ಕೆಲವು ತಿಂಗಳಿನಿಂದ ಸಂಸ್ಥೆ 1.2 ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ.

ಇದನ್ನೂ ಓದಿ: Google birthday: ಗೂಗಲ್‌ಗೆ 25 ವರ್ಷ; ಚಂದದ ಡೂಡಲ್‌ನೊಂದಿಗೆ ಸ್ವಾಗತಿಸಿದ ಕಂಪನಿ

ಅಕ್ಟೋಬರ್‌ ಅಂತ್ಯದೊಳಗೆ ಉದ್ಯೋಗ ಕಡಿತದ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಆದರೆ ಸದ್ಯ ಬೈಜೂಸ್‌ನಲ್ಲಿ ಯಾವುದೇ ಹಿಂಭಡ್ತಿ ಪ್ರಕ್ರಿಯೆ ಇಲ್ಲ ಎಂದು ಮೂಲಗಳು ತಿಳಿಸಿವೆ. ಕೋವಿಡ್‌ ಸಂದರ್ಭದಲ್ಲಿ ಆನ್‌ಲೈನ್‌ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದ ಹಿನ್ನಲೆಯಲ್ಲಿ ಬೈಜೂಸ್‌ ಅನೇಕ ಮಂದಿ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. ಆದರೆ ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ತಲುಪಿರುವುದರಿಂದ ಬಹುತೇಕರು ಸಾಂಪ್ರದಾಯಿಕ ಕಲಿಕಾ ಶೈಲಿಗೆ ಮರಳಿದ್ದಾರೆ. ಹೀಗಾಗಿ ಸಿಬ್ಬಂದಿಯ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹಿಂದೆಯೂ ನಡೆದಿತ್ತು ಉದ್ಯೋಗ ಕಡಿತ

ಬೈಜೂಸ್‌ ಕಂಪನಿಯು ಕೆಲವು ತಿಂಗಳ ಹಿಂದೆಯೂ ಒಂದು ಸಾವಿರ ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌ ನೀಡಿತ್ತು. 2022ರ ಅಕ್ಟೋಬರ್‌ನಲ್ಲಿ 2,500 ನೌಕರರನ್ನು ಕಂಪನಿಯು ಮನೆಗೆ ಕಳುಹಿಸಿತ್ತು. ಮಾತ್ರವಲ್ಲ ಜಾರಿ ನಿರ್ದೇಶನಾಲಯಕ್ಕೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ವರ್ಷದ ಏಪ್ರಿಲ್‌ನಲ್ಲಿ ಬೈಜೂಸ್‌ ಸಂಸ್ಥೆಯ ಮೇಲೆ ಇ.ಡಿ. ದಾಳಿ ನಡೆಸಿತ್ತು. ಬೈಜೂಸ್‌ ಸಂಸ್ಥೆಯ ಮಾಲೀಕ ಬೈಜು ರವೀಂದ್ರನ್‌ ಅವರ ಬೆಂಗಳೂರಿನಲ್ಲಿರುವ ಮನೆ ಹಾಗೂ 2 ಕಚೇರಿಗಳ ಮೇಲೆ ಇ.ಡಿ. ದಾಳಿ ನಡೆಸಿತ್ತು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಮಾಡಿರುವ ಆರೋಪದಡಿ ಈ ದಾಳಿ ನಡೆದಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version