ನವ ದೆಹಲಿ: ಗುಜರಾತ್- ಹಿಮಾಚಲ ಪ್ರದೇಶಗಳ ವಿಧಾನಸಭೆ ಜತೆಜತೆಗೇ ನಡೆದಿರುವ ಐದು ರಾಜ್ಯಗಳ ಆರು ವಿಧಾನಸಭೆ ಹಾಗೂ ಒಂದು ಲೋಕಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಏತನ್ಮಧ್ಯೆ, ಉತ್ತರ ಪ್ರದೇಶದ ಮೈನ್‌ಪುರಿ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿಯೂ ಆಗಿರುವ ಅಖಿಲೇಶ್ ಸಿಂಗ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರು ಭಾರೀ ಅಂತರದಿಂದ ಗೆಲವು ಸಾಧಿಸಿದ್ದಾರೆ. ಮತ್ತೊಂದೆಡೆ, ಅಜಮ್ ಖಾನ್ ಅವರ ಕ್ಷೇತ್ರವಾಗಿದ್ದ ರಾಮಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ(Bypoll Election results 2022).
ಇದೇ ವೇಳೆ, ಉತ್ತರ ಪ್ರದೇಶದ ಖತೌಲಿ ಕ್ಷೇತ್ರದಲ್ಲಿ ಎಸ್‌ಪಿ-ಆರ್‌ಎಲ್‌ಡಿ ಕೂಟದ ಅಭ್ಯರ್ಥಿ ಮದನ್ ಭಯ್ಯಾ ಅವರು 22,054 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇವರ ವಿರುದ್ಧ ಬಿಜೆಪಿಯ ರಾಜಕುಮಾರಿ ಸಯಾನಿ ಸ್ಪರ್ಧಿಸಿದ್ದರು. ಸಯಾನಿ ಅವರಿಗೆ 74,996 ಮತಗಳು ಲಭಿಸಿವೆ.
ಬಿಜೆಡಿಗೆ ಜಯ
ಒಡಿಶಾದ ಪಾದಂಪುರ ಬೈ ಎಲೆಕ್ಷನ್‌ನಲ್ಲಿ ಬಿಜೆಡಿಯ ಬರ್ಷಾ ಸಂಗ್ ಬರಿಹಾ ಅವರು 42,679 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಪ್ರದೀಪ್ ಪುರೋಹಿತ್ ಅವರು ಸೋಲು ಕಂಡಿದ್ದಾರೆ.
ಕಾಂಗ್ರೆಸ್‌ಗೆ ಗೆಲುವು
ಛತ್ತೀಸ್‌ಗಢದ ಭಾನುಪ್ರತಾಪಪುರ್ ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾವಿತ್ರಿ ಮಾಂಡವಿ ಅವರು ಬಿಜೆಪಿಯ ಅಭ್ಯರ್ಥಿ ಬ್ರಹ್ಮಾನಂದ ನೇತಮ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಗೆಲುವಿನ ಅಂತರ 21,171 ಮತಗಳು. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ.
ರಾಜಸ್ಥಾನದ ಸರ್ದಾರ್‌ಶಹರ್ ಬೈ ಎಲೆಕ್ಷನ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅನಿಕುಮಾರ್ ಶರ್ಮಾ ಅವರು ಪ್ರಚಂಡ ಮತಗಳೊಂದಿಗೆ ಗೆಲುವು ಕಂಡಿದ್ದಾರೆ. ಬಿಜೆಪಿಯ ಅಶೋಕ್ ಕುಮಾರ್ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಶರ್ಮಾ 90,915 ಮತಗಳನ್ನು ಪಡೆದುಕೊಂಡು ಜಯಶಾಲಿಯಾಗಿದ್ದಾರೆ. ಈ ಗೆಲುವು ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಭಾರತ್ ಜೋಡೋ ಯಾತ್ರೆಯಲ್ಲಿ ನಿರತವಾಗಿರುವ ರಾಹುಲ್ ಗಾಂಧಿ ಅವರಿಗೆ ಬೂಸ್ಟ್ ನೀಡಿದೆ.
ನಿತೀಶ್ ಕುಮಾರ್‌ಗೆ ಮುಖಭಂಗ
ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರಿಗೆ ಮುಖಭಂಗವಾಗಿದೆ. ಕುರ್ಹಾನಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿ ಮನೋಜ್ ಖುಷ್ವಾ ಅವರು ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಕೇದಾರ್ ಪ್ರಸಾದ್ ಗುಪ್ತಾ ಅವರು 3,632 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮಹಾಮೈತ್ರಿಕೂಟದ ಅಭ್ಯರ್ಥಿ ವಿರುದ್ಧ ಬಿಜೆಪಿ ಜಯ ಸಾಧಿಸಿದೆ.
ಇದನ್ನೂ ಓದಿ | Himachal Election Result 2022 | ಸ್ವಲ್ಪ ಯಾಮಾರಿದರೂ ಹಿಮಾಚಲದಲ್ಲೂ ‘ಕೈ’ ತಪ್ಪಬಹುದು ಅಧಿಕಾರ!