ನವದೆಹಲಿ: ಬಿಹಾರ, ರಾಜಸ್ಥಾನ, ಒಡಿಶಾ, ಮಣಿಪುರ, ಒಡಿಶಾ ಮತ್ತು ಛತ್ತೀಸ್‌ಗಢ ರಾಜ್ಯಗಳ ಕೆಲವು ವಿಧಾನಸಭಾ ಕ್ಷೇತ್ರಗಳ ಬೈಎಲೆಕ್ಷನ್‌ನಲ್ಲಿ (Bypolls in States) ನಿಧಾನಗತಿಯಲ್ಲಿ ಮತದಾನ ನಡೆದಿದೆ. ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭೆ ಕ್ಷೇತ್ರಕ್ಕೂ ಇದೇ ವೇಳೆ ಉಪ ಚುನಾವಣೆ ನಡೆಯುತ್ತಿದೆ. ಏತನ್ಮಧ್ಯೆ, ಕೆಲವು ಕಡೆ ಮತಯಂತ್ರಗಳು ಕೈಕೊಟ್ಟಿರುವ ಘಟನೆಗಳು ನಡೆದಿವೆ.
ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭೆ ಕ್ಷೇತ್ರದ ಬೈಎಲೆಕ್ಷನ್‌ನಲ್ಲಿ ಜನರಿಗೆ ಮತದಾನ ಮಾಡದಂತೆ ಸ್ಥಳೀಯ ಆಡಳಿತವು ಹಾಗೂ ಪೊಲೀಸರು ತಡೆಯುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷವು ಆರೋಪಿಸಿದೆ. ಉತ್ತರ ಪ್ರದೇಶದ ರಾಂಪುರ್ ಸದರ್ ಮತ್ತು ಖತೌಲಿ, ಒಡಿಶಾದ ಪದಂಪುರ, ರಾಜಸ್ಥಾನದ ಸರ್ದರ್ಶಹರ್, ಬಿಹಾರದ ಕುರ್ಹಾನಿ ಮತ್ತು ಛತ್ತೀಸ್‌ಗಢದ ಭಾನುಪ್ರತಾಪುರ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.
ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ಈ ಹಿಂದೆ ಐದು ಬಾರಿ ಪ್ರತಿನಿಧಿಸಿದ್ದ ಮೈನ್‌ಪುರಿ ಕ್ಷೇತ್ರದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಇದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇಲ್ಲಿ ರಘುರಾಜ್ ಸಿಂಗ್ ಶಾಕ್ಯಾ ಅವರು ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ.
ಏತನ್ಮಧ್ಯೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿವೆ. ಪೊಲೀಸ್ ಬಳಕೆಯ ವಿರುದ್ಧ ಆರೋಪ ಮಾಡಿರುವ ಎಸ್‌ಪಿ, ಮತವನ್ನು ಚಲಾಯಿಸದಂತೆ ಚುನಾವಣಾ ಅಧಿಕಾರಿಗಳು ಸಂಚು ಮಾಡತ್ತಿದ್ದಾರೆಂದು ದೂರಿದೆ. ಈ ಆರೋಪಗಳನ್ನು ನಿರಾಕರಿಸಿರುವ ಬಿಜೆಪಿ, ಮೈನಪುರಿಯ ಕ್ಷೇತ್ರದ ಕೆಲವು ಕಡೆ ಎಸ್‌ಪಿ ಜನರಿಗೆ ಮತ ಹಾಕದಂತೆ ತಡೆಯುತ್ತಿದೆ ಪ್ರತ್ಯಾರೋಪ ಮಾಡಿದೆ. ಈ ಕೂಡಲೇ ಚುನಾವಣಾ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ಬಿಜೆಪಿ ಯುಪಿ ಮುಖ್ಯ ಚುನಾವಣಾ ಅಧಿಕಾರಿಯನ್ನು ಭೇಟಿ ಮಾಡಿ ಮನವಿ ಮಾಡಿದೆ.
ಇದನ್ನೂ ಓದಿ | Gujarat Election | ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ