ನವದೆಹಲಿ: ಪಂಜಾಬ್‌ನಲ್ಲಿ 1 ಲೋಕಸಭೆ ಕ್ಷೇತ್ರ ಹಾಗೂ ಉತ್ತರ ಪ್ರದೇಶ, ಒಡಿಶಾ ಸೇರಿ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಉತ್ತರ ಪ್ರದೇಶದಲ್ಲಿ ಮಾತ್ರ ಮುನ್ನಡೆಯಾಗಿದೆ. ಪಂಜಾಬ್‌ನ ಜಲಂಧರ್ ಲೋಕಸಭೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸುಶೀಲ್ ಕುಮಾರ್ ರಿಂಕು ಅವರು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಪಂಜಾಬ್‌ನಲ್ಲಿ ಆಪ್ ಬಿಗಿ ಹಿಡಿತವಿದೆ ಎಂಬುದನ್ನು ಸಾಬೀತುಪಡಿಸಿದೆ. 58 ಸಾವಿರಕ್ಕೂ ಅಧಿಕ ಮತಗಳಿಂದ ಮಾಜಿ ಶಾಸಕ ಸುಶೀಲ್ ಕುಮಾರ್ ರಿಂಕು ಗೆಲುವು ಸಾಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಮುನ್ನಡೆ
ಉತ್ತರ ಪ್ರದೇಶದ ಸುವಾರ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದೆ. ಬಿಜೆಪಿ ಮೈತ್ರಿ ಕೂಟದ ಅಪ್ನಾದಳ (ಸೋನೆಲಾಲ್) ಪಕ್ಷದ ಶಫೀಕ್ ಅಹ್ಮದ್ ಅನ್ಸಾರ್ ಅವರು ಪ್ರತಿಸ್ಪರ್ಧಿ, ಸಮಾಜವಾದಿ ಪಕ್ಷದ ಅನುರಾಧಾ ಚೌಹಾನ್ ವಿರುದ್ಧ 8,724 ಮತಗಳ ಅಂತರದಿಂದ ಗೆದ್ದಿದ್ದಾರೆ. ಇನ್ನು ಚಾನ್‌ಬೇ ವಿಧಾನಸಭೆ ಕ್ಷೇತ್ರದಲ್ಲೂ ಅಪ್ನಾ ದಳದ ರಿಂಕಿ ಕೋಲ್ ಅವರು ಸಮಾಜವಾದಿ ಪಕ್ಷದ ಕೀರ್ತಿ ಕೋಲ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಒಡಿಶಾದಲ್ಲಿ ದೀಪಾಲಿ ದಾಸ್ ಗೆಲುವು
ಒಡಿಶಾದ ಜರ್ಸುಗುಡ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜು ಜನತಾದಳದ (BJD) ದೀಪಾಲಿ ದಾಸ್ ಅವರು 48 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ತಂಕಾಧರ್ ತ್ರಿಪಾಠಿ ವಿರುದ್ಧ ದೀಪಾಲಿ ದಾಸ್ ಜಯಭೇರಿ ಬಾರಿಸಿದ್ದಾರೆ. ದೀಪಾಲಿ ದಾಸ್ ಅವರ ತಂದೆ ನಬಾ ಕಿಶೋರ್ ದಾಸ್ ಅವರು ಹತ್ಯೆಗೀಡಾದ ಕಾರಣ ಉಪ ಚುನಾವಣೆ ನಡೆದಿದ್ದು, ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: Karnataka Election Results: ಪ್ರಾಬಲ್ಯದ ವಿರುದ್ಧ ಜನಶಕ್ತಿ ಗೆದ್ದಿದೆ; ಫಲಿತಾಂಶದ ಬಳಿಕ ರಾಹುಲ್ ಗಾಂಧಿ ಹೇಳಿದ್ದಿಷ್ಟು
ಮೇಘಾಲಯದಲ್ಲಿ ಯುಡಿಪಿಗೆ ಜಯ
ಮೇಘಾಲಯದ ಸೋಹಿಯಾಂಗ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಕ್ಷದ (UDP) ಸಿನ್ಶಾರ್ ಕುಪಾರ್ ರಾಯ್ ಲಿಂಗ್‌ಡೋಗ್ ಅವರು ನ್ಯಾಷನಲ್ ಪೀಪಲ್ಸ್ ಪಕ್ಷದ (NPP) ಸಮ್ಲಿನ್ ಮಾಲ್ನ್‌ಜಿಯಾಂಗ್ ವಿರುದ್ಧ 3,422 ಮತಗಳಿಂದ ಗೆಲುವು ಸಾಧಿಸಿದ್ದಾರೆ.