ಮಧ್ಯಪ್ರದೇಶ: ಲೋಕಸಭಾ ಚುನಾವಣೆ(Lok Sabha Election 2024)ಯ ರಂಗೇರಿದೆ. ಇದರ ನಡುವೆಯೇ ಬಹುಚರ್ಚಿತ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತೆ ಸದ್ದು ಮಾಡುತ್ತಿದೆ. ದೇಶಾದ್ಯಂತ ಚುನಾವಣೆಗ ಅಂತ್ಯಗೊಳುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಈ ಕಾಯ್ದೆಯನ್ನು ಅನುಷ್ಠಾನಗೊಳಿಸಿ, ಪೌರತ್ವ ನೀಡುವ ಪ್ರಕ್ರಿಯೆ ಆರಂಭಿಸಬೇಕೆಂದು ಕೇಂದ್ರ ನಿರ್ಧರಿಸಿದೆ. ಇದಕ್ಕೆ ಪೂರಕವೆಂಬಂತೆ ಇದೀಗ ಮಧ್ಯಪ್ರದೇಶ(Madhya Pradesh) ಮುಖ್ಯಮಂತ್ರಿ ಮೋಹನ್ ಯಾದವ್(Mohan Yadav) ಕೇಂದ್ರ ಸೂಚನೆ ನೀಡಿದ ಕೂಡಲೇ ರಾಜ್ಯದಲ್ಲಿ ಸಿಎಎ ಅನುಷ್ಠಾನಗೊಳಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.
ಉಜ್ಜೈನ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿ ನಡೆಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ದೇಶ ಒಂದೇ ಆಗಿದೆ. ನಾವು ಶೇ.100ರಷ್ಟು ಸಿದ್ದರಾಗಿದ್ದೇವೆ. ಕೇಂದ್ರದಿಂದ ಸೂಚನೆ ಬರುತ್ತಿದ್ದಂತೆ ರಾಜ್ಯದಲ್ಲಿ ಸಿಎಎ ಅನುಷ್ಠಾನಗೊಳಿಸಲಾಗುತ್ತದೆ. ಈ ಬಾರಿ ರಾಜ್ಯದಲ್ಲಿ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಳ್ಳಲಿದೆ ಎಂಬುದರಲ್ಲಿ ಸಂಶಯ ಇಲ್ಲ. ಪ್ರಧಾನಿ ಮೋದಿ ಮತ್ತು ಬಿಜೆಪಿ ಪರ ಜನರು ಅತಿ ಹೆಚ್ಚು ಒಲವನ್ನು ಇಟ್ಟುಕೊಂಡಿದ್ದಾರೆ. ಇನ್ನು ಮುಸ್ಲಿಮರು ಮತ್ತು ಆದಿವಾಸಿಗಳು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬುದು ತಪ್ಪು ಕಲ್ಪನೆ ಎಂದು ಹೇಳಿದ್ದಾರೆ.
ಇನ್ನು ಪಾಕಿಸ್ತಾನದ ಬಗ್ಗೆ ಗೌರವ ಇರಬೇಕೆಂದು ಹೇಳಿಕೆ ನೀಡಿದ್ದ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತದ ಶಕ್ತಿಗಿಂತ ಹೆಚ್ಚು ಪಾಕಿಸ್ತಾನದ ಮೇಲೆಯೇ ಕಾಂಗ್ರೆಸ್‌ನವರಿಗೆ ನಂಬಿಕೆ ಇದೆ. ಇಂಧೋರ್‌ನಲ್ಲಿ ಅವರ ಅಭ್ಯರ್ಥಿ ಬಿಜೆಪಿ ಸೇರ್ಪಡೆಗೊಂಡ ಬಳಿಕ ಕಂಗೆಟ್ಟಿರುವ ಕಾಂಗ್ರೆಸ್ ನೋಟಾ ಚಲಾಯಿಸುವಂತೆ ಜನರಿಗೆ ಒತ್ತಾಯಿಸುತ್ತಿದೆ. ಇದು ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದ ಮೇಲೆ ಎಷ್ಟು ನಂಬಿಕೆ ಇದೆ ಎಂಬುದನ್ನು ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಅಡಿಯಲ್ಲಿ ಮೊದಲ ಪೌರತ್ವವನ್ನು ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದರು. ಸಿಎಎ ಅಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ನಿಯಮಗಳ ಪ್ರಕಾರ ಪರಿಶೀಲನೆ ನಡೆಯುತ್ತಿದೆ ಎಂದು ಅಮಿತ್ ಶಾ ನ್ಯೂಸ್ 18 ಗೆ ನೀಡಿರುವ ಸಂದರ್ಶನದಲ್ಲಿ ಲೋಕಸಭಾ ಚುನಾವಣೆ ಕೊನೆಯ ಹಂತದ ಮೊದಲು, ಪೌರತ್ವ ನೀಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:Cyber crime: ದೇಶಾದ್ಯಂತ 28,000ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಬ್ಲಾಕ್!
ಏನಿದು ಪೌರತ್ವ ತಿದ್ದುಪಡಿ ಕಾಯ್ದೆ ?
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಾರ್ಚ್‌ನಲ್ಲಿ ಸಿಎಎ ಅನ್ನು ಜಾರಿಗೆ ತಂದಿತು. 2014ರ ಡಿಸೆಂಬರ್ 31ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಬಿಜೆಪಿ ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಸಿಎಎಯನ್ನು 2019ರ ಡಿಸೆಂಬರ್ 11ರಂದು ಸಂಸತ್ತು ಅಂಗೀಕರಿಸಿತು. ಅದೇ ವರ್ಷದ ಡಿಸೆಂಬರ್ 12ರಂದು ಅಧಿಸೂಚನೆ ಹೊರಡಿಸಲಾಯಿತು. ಆದಾಗ್ಯೂ, ನಿಯಮಗಳನ್ನು ಸೂಚಿಸದ ಕಾರಣ ಕಾಯ್ದೆಯನ್ನು ಜಾರಿಗೆ ತರಲು ತಡವಾಯಿತು.
.