ನವದೆಹಲಿ: ಕೇಂದ್ರ ಸರ್ಕಾರವು ರೈತರಿಗೆ ಸಿಹಿ ಸುದ್ದಿ ನೀಡಿದೆ. 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರಕ್ಕೆ 1.08 ಕೋಟಿ ರೂಪಾಯಿ ಸಬ್ಸಿಡಿ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯು ಅನುಮೋದನೆ ನೀಡಿದೆ. ಇದರಿಂದ ದೇಶದ 12 ಕೋಟಿಗೂ ಅಧಿಕ ರೈತರಿಗೆ ಅನುಕೂಲವಾಗಲಿದೆ. ರಸಗೊಬ್ಬರದ ಬೆಲೆಯೇರಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಕೇಂದ್ರ ಸಚಿವ ಸಂಪುಟ ಸಭೆ ಮುಗಿದ ಬಳಿಕ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಂಡಾವಿಯ, “ಮುಂಗಾರು ಹಂಗಾಮಿಗೆ ಯೂರಿಯಾ ರಸಗೊಬ್ಬರಕ್ಕೆ 70 ಸಾವಿರ ಕೋಟಿ ರೂಪಾಯಿ, ಡಿಎಪಿ ರಸಗೊಬ್ಬರಕ್ಕೆ 38 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.
ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಕೇಂದ್ರ ಸರ್ಕಾರವು ಒಟ್ಟು 1.08 ಲಕ್ಷ ಕೋಟಿ ರೂಪಾಯಿ ಸಬ್ಸಿಡಿಯನ್ನು ರಸಗೊಬ್ಬರಕ್ಕಾಗಿ ವಿನಿಯೋಗಿಸುತ್ತದೆ. ಇದರಿಂದ ರಸಗೊಬ್ಬರದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬೆಲೆಯೇರಿಕೆ ಆಗದ ಕಾರಣ ರೈತರ ಜೇಬಿಗೆ ಭಾರ ಎನಿಸುವುದಿಲ್ಲ. ಸದ್ಯ ಯೂರಿಯಾ ಒಂದು ಬ್ಯಾಗ್‌ಗೆ 276 ರೂಪಾಯಿ ಇದ್ದರೆ, ಡಿಎಪಿಗೆ 1,350 ರೂಪಾಯಿ ಇದೆ.
ಇದನ್ನೂ ಓದಿ: FAME II sops : ಓಲಾ ಸೇರಿ 4 ಇ-ಸ್ಕೂಟರ್ ಕಂಪನಿಗಳಿಗೆ 500 ಕೋಟಿ ರೂ. ಸಬ್ಸಿಡಿ, ಗ್ರಾಹಕರಿಗೆ ಏನೇನು ಲಾಭ?
ಐಟಿ ಹಾರ್ಡ್‌ವೇರ್‌ಗೆ 17 ಸಾವಿರ ಕೋಟಿ ರೂ. ಪಿಎಲ್‌ಐ
ಐಟಿ ಹಾರ್ಡ್‌ವೇರ್‌ಗಳಿಗೆ ಕೇಂದ್ರ ಸರ್ಕಾರವು 17 ಸಾವಿರ ಕೋಟಿ ರೂಪಾಯಿ ಉತ್ಪಾದನೆ ಆಧಾರಿತ ಇನ್ಸೆಂಟಿವ್ (PLI) ಘೋಷಿಸಿದೆ. ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪಿಸಿಗಳು, ಸರ್ವರ್‌ಗಳು ಹಾಗೂ ಅತಿ ಚಿಕ್ಕ ಡಿವೈಸ್‌ಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ 6 ವರ್ಷಗಳಿಗೆ 17 ಸಾವಿರ ಕೋಟಿ ರೂ. ನೀಡಲಿದೆ ಎಂದು ಮನ್ಸುಖ್ ಮಂಡಾವಿಯ ಮಾಹಿತಿ ನೀಡಿದರು. ಇದರಿಂದ ಐಟಿ ಹಾರ್ಡ್‌ವೇರ್‌ಗಳ ಉತ್ಪಾದನೆ ಹೆಚ್ಚಾಗುವ ಜತೆಗೆ 75 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೂಡ ಹೇಳಿದರು.