ನವದೆಹಲಿ: ಸಾವಯವ ಕೃಷಿ ಉತ್ತೇಜನ, ಬೀಜ ವಿತರಣೆ ಹಾಗೂ ಬೀಜ ರಫ್ತಿಗೆ ಉತ್ತೇಜನ ನೀಡುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಬಹು ರಾಜ್ಯ ಸಹಕಾರ ಸಂಘಗಳ ಕಾಯ್ದೆ-2002 (ಎಂಎಸ್‌ಸಿಎಸ್) ಅಡಿಯಲ್ಲಿ ಮೂರು ರಾಷ್ಟ್ರ ಮಟ್ಟದ ಸಹಕಾರ ಸಂಘಗಳ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆ (Union Cabinet) ಸಮ್ಮತಿ ಸೂಚಿಸಿದೆ.
ರಾಷ್ಟ್ರಮಟ್ಟದ ಸಹಕಾರ ಸಂಘಗಳು ದೇಶದ ಸಹಕಾರ ಸಂಘಗಳ ಉನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿವೆ. ಸಣ್ಣ ಸಹಕಾರ ಸಂಘಗಳಿಂದ ಹಿಡಿದು ಬೃಹತ್ ಸಹಕಾರ ಸಂಘಗಳ ಮಧ್ಯೆ ಸಹಯೋಗ, ಪರಸ್ಪರ ನೆರವು ಇರಲಿದೆ. ಹಾಗೆಯೇ, ಬಿತ್ತನೆ ಬೀಜಗಳ ಉತ್ಪಾದನೆ, ಸಂಗ್ರಹಣೆ, ಪರಿಷ್ಕರಣೆ, ಬ್ರ್ಯಾಂಡಿಂಗ್, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಹಾಗೂ ವಿತರಣೆಗೆ ಹೆಚ್ಚಿನ ಉತ್ತೇಜನ ನೀಡಲಿವೆ. ಹಾಗೆಯೇ, ಮೂರೂ ಸಹಕಾರ ಸಂಘಗಳ ಉದ್ದೇಶವು ಬಿತ್ತನೆ ಬೀಜಗಳ ರಫ್ತಿಗೂ ಹೆಚ್ಚಿನ ಆದ್ಯತೆ ನೀಡುವುದಾಗಿದೆ.
ದೇಶದ 8.5 ಲಕ್ಷ ಸಹಕಾರ ಸಂಘಗಳು ಉತ್ಪನ್ನಗಳನ್ನು ರಫ್ತು ಮಾಡಲು ರಾಷ್ಟ್ರ ಮಟ್ಟದ ಸಹಕಾರ ಸಂಘಗಳು ನೆರವಾಗಲಿವೆ. ಇದರಿಂದ ರೈತರಿಗೆ ಲಾಭವಾಗುವ ಜತೆಗೆ ಉದ್ಯೋಗವೂ ದೊರೆಯಲಿದೆ. ಇದೊಂದು ಐತಿಹಾಸಿಕ ತೀರ್ಮಾನವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಒಕ್ಕೂಟಗಳು ಮತ್ತು ಬಹು ರಾಜ್ಯ ಸಹಕಾರಿ ಸಂಘಗಳು ಸೇರಿ ಪ್ರಾಥಮಿಕದಿಂದ ರಾಷ್ಟ್ರಮಟ್ಟದ ಸಹಕಾರಿ ಸಂಘಗಳು ರಾಷ್ಟ್ರ ಮಟ್ಟದ ಸಹಕಾರ ಸಂಘದ ಸದಸ್ಯರಾಗಬಹುದು. ಎಲ್ಲ ಸಹಕಾರ ಸಂಘಗಳು ಅದರ ಉಪವಿಧಿಗಳ ಪ್ರಕಾರ ಸೊಸೈಟಿಯ ಮಂಡಳಿಯಲ್ಲಿ ತಮ್ಮ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತವೆ.
ಯುಪಿಐ ವಹಿವಾಟಿಗೆ ಉತ್ತೇಜನ
ರುಪೇ ಕಾರ್ಡ್ ಹಾಗೂ ಯುಪಿಐ ವಹಿವಾಟುಗಳ ಉತ್ತೇಜನಕ್ಕಾಗಿ 2,600 ಕೋಟಿ ರೂಪಾಯಿಯನ್ನು ವಿನಿಯೋಗಿಸಲು ಕೇಂದ್ರ ಸಂಪುಟ ಸಭೆಯು ಸಮ್ಮತಿ ಸೂಚಿಸಿದೆ. 2023ನೇ ಸಾಲಿನ ಹಣಕಾಸು ಸಾಲಿನಲ್ಲಿ 2,600 ಕೋಟಿ ರೂಪಾಯಿಯನ್ನು ಬಳಸಲಾಗುತ್ತದೆ. ರುಪೇ ಕಾರ್ಡ್ ಹಾಗೂ ಯುಪಿಐ ಮೂಲಕ ಸಣ್ಣ ಮೊತ್ತದ ವಹಿವಾಟುಗಳನ್ನು ಉತ್ತೇಜಿಸಲು ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರವು ಪ್ರೋತ್ಸಾಹ ಧನ ನೀಡಲಿದೆ. ಪಾಯಿಂಟ್ ಆಫ್ ಸೇಲ್ (PoS) ಹಾಗೂ ಇ-ಕಾಮರ್ಸ್ ವಹಿವಾಟುಗಳಿಗೆ ಉತ್ತೇಜನ ನೀಡಿದರೆ ಪ್ರೋತ್ಸಾಹ ಧನ ಸಿಗಲಿದೆ.
ಇದನ್ನೂ ಓದಿ | National youth Festival | ಯುವಜನೋತ್ಸವಕ್ಕೆ ಸಜ್ಜಾದ ಅವಳಿ ನಗರ: ಮೋದಿಗೆ ಸ್ಮರಣಿಕೆಯಾಗಿ ವಿವೇಕ ಪುತ್ಥಳಿ