Site icon Vistara News

PMAY: ನಗರ ಪ್ರದೇಶಗಳ ಬಡವರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್;‌ 1 ಕೋಟಿ ಮನೆ ನಿರ್ಮಾಣಕ್ಕೆ ಕೇಂದ್ರ ಅಸ್ತು

PMAY

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ- ನಗರ 2.0 ಜಾರಿಗೆ (PMAY 2.0) ಕೇಂದ್ರ ಸಚಿವ ಸಂಪುಟ ಸಭೆಯು ಸಮ್ಮತಿ ಸೂಚಿಸಿದ್ದು, ನಗರ ಪ್ರದೇಶಗಳ 1 ಕೋಟಿ ಬಡವರು ಹಾಗೂ ಮಧ್ಯಮವರ್ಗದವರು ಇದರ ಪ್ರಯೋಜನ ಪಡೆಯಲಿದ್ದಾರೆ. ಅಂದರೆ ಪಿಎಂಎವೈ ಯೋಜನೆ ಅಡಿಯಲ್ಲಿ ನಗರ ಪ್ರದೇಶಗಳಲ್ಲಿ 1 ಕೋಟಿ ಮನೆಗಳನ್ನು ನಿರ್ಮಿಸಲಾಗುತ್ತದೆ.

ಮುಂದಿನ 5 ವರ್ಷಗಳಲ್ಲಿ ಒಂದು ಕೋಟಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, 1 ಕೋಟಿ ಕುಟುಂಬಗಳಿಗೆ ಹಣಕಾಸು ನೆರವು ನೀಡಲಿದೆ. ನಗರ ಪ್ರದೇಶಗಳಲ್ಲಿ ಸುಸಜ್ಜಿತ ಮನೆ ನಿರ್ಮಿಸುವವರಿಗೆ ಕೇಂದ್ರ ಸರ್ಕಾರವು 1 ಚದರ ಅಡಿಗೆ 3 ಸಾವಿರ ರೂ. ನೆರವು ನೀಡಲಿದೆ. ಇನ್ನು ಇಂಟರೆಸ್ಟ್‌ ಸಬ್ಸಿಡಿ ಯೋಜನೆ ಅಡಿಯಲ್ಲಿ ಬಡ ಕುಟುಂಬಗಳಿಗೆ 25-35 ಲಕ್ಷ ರೂ.ವರೆಗೆ ಶೇ.4ರ ಬಡ್ಡಿದರದೊಂದಿಗೆ ಸಾಲ ನೀಡುತ್ತದೆ. 1.8 ಲಕ್ಷ ರೂ.ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರವು 2.3 ಲಕ್ಷ ಕೋಟಿ ರೂ. ವ್ಯಯಿಸಲಾಗಿದೆ. ಹಾಗೆಯೇ, ಪಿಎಂಎವೈ 2.0 ಯೋಜನೆಗೆ 10 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದೆ.

8 ರೈಲ್ವೆ ಲೈನ್‌ ಯೋಜನೆಗಳಿಗೆ ಅನುಮೋದನೆ

ದೇಶದ 7 ರಾಜ್ಯಗಳ 14 ಜಿಲ್ಲೆಗಳ ಮೂಲಕ ಹಾದು ಹೋಗುವ 8 ಹೊಸ ರೈಲ್ವೆ ಲೈನ್‌ ಯೋಜನೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ವ್ಯಾಪಾರ, ಸಂಪರ್ಕ ಹಾಗೂ ಉದ್ಯೋಗ ಸೃಷ್ಟಿಗೆ ಈ ಯೋಜನೆಗಳು ಸಹಕಾರಿಯಾಗಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಒಡಿಶಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್‌, ಬಿಹಾರ, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ 8 ಹೊಸ ರೈಲ್ವೆ ಲೈನ್‌ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಡವರು ಸ್ವಂತ ಮನೆ ಕನಸನ್ನು ನನಸು ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್‌ ಯೋಜನೆ ಜಾರಿಗೆ ತಂದಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸುಮಾರು 4.21 ಕೋಟಿ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಪಿಎಂಎವೈ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು.

ಇದನ್ನೂ ಓದಿ: CM Siddaramaiah: ಬಜೆಟ್ ಮೂಲಪಾಠವೇ ಗೊತ್ತಿಲ್ಲದ ನಿರ್ಮಲಾ ಸೀತಾರಾಮನ್; ಸಂಪುಟದಿಂದ ಕೈಬಿಡಲು ಸಿಎಂ ಒತ್ತಾಯ

Exit mobile version