Site icon Vistara News

BrahMos Missiles: ನೌಕಾಪಡೆಗೆ ಭೀಮಬಲ; 200 ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ಕೇಂದ್ರ ಅಸ್ತು

BrahMos Missiles

ನವದೆಹಲಿ: ದೇಶದ ನೌಕಾಪಡೆಯ (Indian Navy) ಬಲ ಹೆಚ್ಚಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಸುಮಾರು 19 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 200 ಬ್ರಹ್ಮೋಸ್‌ ಕ್ಷಿಪಣಿಗಳ (BrahMos Missiles) ಖರೀದಿಗೆ ಭದ್ರತಾ ಸಂಪುಟ ಸಮಿತಿಯು (Cabinet Committee on Security) ಅನುಮೋದನೆ ನೀಡಿದೆ. ಇದರಿಂದಾಗಿ ಭಾರತದ ನೌಕಾಪಡೆಯು ಸಾಗರ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸುವ ಜತೆಗೆ ಯಾವುದೇ ಕಾರ್ಯಾಚರಣೆಗೂ ಸನ್ನದ್ಧವಾಗಿರಲು ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

ಕ್ಷಿಪಣಿಗಳ ಸಾಮರ್ಥ್ಯ ಏನೇನು?

ಬ್ರಹ್ಮೋಸ್‌ ಕ್ಷಿಪಣಿಗಳು ಭೂಮಿ, ಸಮುದ್ರ ಹಾಗೂ ಆಗಸದಿಂದಲೂ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿವೆ. ಇವು ಶಬ್ದಕ್ಕಿಂತ ಎರಡು ಪಟ್ಟು ವೇಗದಲ್ಲಿ ಸಂಚರಿಸಿ, ನಿರ್ದಿಷ್ಟ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿವೆ. ಸುಮಾರು 290 ಕಿಲೋಮೀಟರ್‌ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲವು. ಹಾಗೆಯೇ, ಗುರಿಯನ್ನು 500 ಕಿಲೋಮೀಟರ್‌ವರೆಗೆ ವಿಸ್ತರಣೆ ಮಾಡಬಹುದಾಗಿದೆ. ಭಾರತೀಯ ನೌಕಾಪಡೆಗಳಿಗೆ ಈ ಕ್ಷಿಪಣಿಗಳು ಸೇರಿದರೆ, ಸಮುದ್ರದಲ್ಲಿ ಯಾವುದೇ ವೈರಿಗಳನ್ನು ನಿಗ್ರಹಿಸಲು ಸಾಧ್ಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕ್ಷಿಪಣಿಗಳ ಖರೀದಿಗೆ ಬ್ರಹ್ಮೋಸ್‌ ಏರೋಸ್ಪೇಸ್‌ ಹಾಗೂ ಕೇಂದ್ರ ಸರ್ಕಾರವು ಮಾರ್ಚ್‌ ಕೊನೆಯ ವಾರದಲ್ಲಿ ಒಪ್ಪಂದ ಮಾಡಿಕೊಳ್ಳಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ತುರ್ತು ಸಂದರ್ಭಗಳಲ್ಲಿ ಯಾವುದೇ ಆಕ್ರಮಣಕಾರಿ ದಾಳಿಗಳನ್ನು ನಿಯಂತ್ರಿಸುವ, ಯುದ್ಧನೌಕೆಗಳನ್ನೇ ಧ್ವಂಸಗೊಳಿಸುವ ಸಾಮರ್ಥ್ಯ ಇವುಗಳಲ್ಲಿದೆ. ಹಾಗಾಗಿ, ಬ್ರಹ್ಮೋಸ್‌ ಕ್ಷಿಪಣಿಗಳಿಗೆ ಭಾರಿ ಬೇಡಿಕೆಯುಂಟಾಗಿದ್ದು, ಬ್ರಹ್ಮೋಸ್‌ ಏರೋಸ್ಪೇಸ್‌, ಶೀಘ್ರದಲ್ಲೇ ಫಿಲಿಪೈನ್ಸ್‌ಗೆ ರಫ್ತು ಮಾಡಲಿದೆ ಎಂದು ತಿಳಿದುಬಂದಿದೆ. ಸಾಗರ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇಡಲು ಕೂಡ ಇದರಿಂದ ನೆರವಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ಬಗ್ಗೆ ಅಮೆರಿಕದ ಪ್ರಶ್ನೆಗೆ ‘ಸ್ಮಾರ್ಟ್’‌ ಉತ್ತರ ಕೊಟ್ಟ ಜೈಶಂಕರ್; ಏನದು?

ಬಾಹ್ಯಾಕಾಶ ಕ್ಷೇತ್ರದಲ್ಲಿ 100% ಎಫ್‌ಡಿಐಗೆ ಅಸ್ತು

ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (FDI) ಬುಧವಾರ (ಫೆಬ್ರವರಿ 21) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದರಿಂದಾಗಿ, ಬಾಹ್ಯಾಕಾಶ ಕ್ಷೇತ್ರಕ್ಕೆ ವಿದೇಶದಿಂದ ಅಪಾರ ಪ್ರಮಾಣದ ಬಂಡವಾಳ ಹರಿದು ಬಂದು, ಹೆಚ್ಚಿನ ಸಂಶೋಧನೆ, ಉಡಾವಣೆ ಕೈಗೊಳ್ಳಲು ಸಾಧ್ಯವಾಗಲಿದೆ ಎಂಬುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version