Site icon Vistara News

Cabinet Meeting: ವಿಶ್ವಕರ್ಮ ಯೋಜನೆಗೆ ಒಪ್ಪಿಗೆ, ಕುಶಲಕರ್ಮಿಗಳಿಗೆ 2 ಲಕ್ಷ ರೂ. ಸಾಲ; ಬಡ್ಡಿ ಎಷ್ಟು?

Ashwini vaishnaw

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಆಗಸ್ಟ್ 15ರಂದು ದಿಲ್ಲಿ ಕೆಂಪುಕೋಟೆಯಲ್ಲಿ ನಿಂತು ಸ್ವಾತಂತ್ರ್ಯೋತ್ಸವ ಭಾಷಣ ಮಾಡುವಾಗ, ವಿಶ್ವಕರ್ಮ ಯೋಜನೆಯ (PM Vishwakarma Scheme) ಬಗ್ಗೆ ಪ್ರಸ್ತಾಪಿಸಿದ್ದರು. ಅದರ ಮಾರನೇ ದಿನವೇ ‘ಪಿಎಂ ವಿಶ್ವಕರ್ಮ ಯೋಜನೆ’ಗೆ ಕೇಂದ್ರ ಸಚಿವ ಸಂಪುಟ ಸಭೆಯು (Central Cabinnet Meeting) ತನ್ನ ಒಪ್ಪಿಗೆಯನ್ನು ನೀಡಿದೆ. ಐದು ವರ್ಷಗಳ ಕಾಲ ಈ ಯೋಜನೆಗೆ ಒಟ್ಟು 13 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, 18 ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಲಾಭ ದೊರೆಯಲಿದೆ. ವಿಶೇಷವಾಗಿ ಹಿಂದುಳಿದ ವರ್ಗಗಳ 30 ಲಕ್ಷ ಜನರಿಗೆ ವಿಶ್ವಕರ್ಮ ಯೋಜನೆಯಿಂದ ಪ್ರಯೋಜನವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Central Minister Ashwini Vaishnaw) ಅವರು ಹೇಳಿದ್ದಾರೆ.

ಈ ಯೋಜನೆಯಡಿ ಕುಶಲಕರ್ಮಿಗಳು ಮತ್ತು ಕುಶಲ ಕೆಲಸಗಾರರಿಗೆ ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಯ ಮೂಲಕ ಮಾನ್ಯತೆ ನೀಡಲಾಗುವುದು. ಅವರಿಗೆ ಒಂದು ಲಕ್ಷ ರೂ.(ಮೊದಲ ಹಂತ) ಮತ್ತು 2 ಲಕ್ಷ ರೂ. (ಎರಡನೇ ಹಂತ) ವರೆಗೆ ಸಾಲದ ಬೆಂಬಲವನ್ನು ನೀಡಲಾಗುತ್ತದೆ. ಜತೆಗೆ ಗರಿಷ್ಠ ಶೇ.5 ಬಡ್ಡಿ ದರ ಇರಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದರು.

ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೌಶಲ್ಯ ಉನ್ನತೀಕರಣ, ಟೂಲ್ ಕಿಟ್‌ಗಳು, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಮತ್ತು ಮಾರುಕಟ್ಟೆ ಬೆಂಬಲವನ್ನು ಸಹ ನೀಡಲಾಗುವುದು ಎಂದು ಕೇಂದ್ರ ಸರ್ಕಾರದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಾಹಾರಗಳ ಸಂಪುಟ ಸಮಿತಿ ಪಿಎಂ ವಿಶ್ವಕರ್ಮ ಯೋಜನೆಗೆ, ಇತರ ಮಾನದಂಡಗಳೊಂದಿಗೆ ತನ್ನ ಒಪ್ಪಿಗೆ ನೀಡಿದೆ. ವಿಶ್ವಕರ್ಮ ಯೋಜನೆಯಿಂದ ಸುಮಾರು 30 ಲಕ್ಷ ಜನರು ಮತ್ತು ಅವರ ಕುಟುಂಬಗಳಗೆ ಲಾಭವಾಗಲಿದೆ ಎಂದು ಕೇಂದ್ರ ಸಚವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.

ಬಡಿಗ, ಚಮ್ಮಾರ, ಕಮ್ಮಾರ, ಬೀಗ ತಯಾರಿಸುವವರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಮತ್ತು ಮೇಸ್ತ್ರಿಗಳು ಸೇರಿದಂತೆ ಸಾಂಪ್ರದಾಯಿಕ ಕುಶಲ ಕೆಲಸಗಳನ್ನು ಮಾಡುವ ಕುಶಲಕರ್ಮಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ.

Cabinet Meeting: 10 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಪೂರೈಕೆಗೆ ಒಪ್ಪಿಗೆ

ದೇಶದ ನೂರು ನಗರಗಳಿಗೆ (100 City) ಸಾವಿರ ಎಲೆಕ್ಟ್ರಿಕ್ ಬಸ್‌ಗಳ (Electric Buses) ಪೂರೈಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಪಿಎಂ ಇ-ಬಸ್ ಸೇವಾ (PM e-bus Seva) ಯೋಜನೆಯಡಿ ಈ 10 ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಲಾಗುತ್ತದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Union I&B minister Anurag Thakur) ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Independence Day 2023: ವಿಶ್ವಕರ್ಮ ಯೋಜನೆ, ಮಹಿಳಾ ಸ್ವಸಹಾಯ ಸಂಘ ಘೋಷಿಸಿದ ಮೋದಿ; ಏನಿವು? ಯಾರಿಗೆ ಉಪಯೋಗ?

ಕೇಂದ್ರ ಸಚಿವ ಸಂಪುಟದ ಕುರಿತು ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು, ಪಿಎಂ ಇ-ಬಸ್ ಸೇವೆಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ. ಈ ಮೂಲಕ ಹಸಿರು ಸಾರಿಗೆ ಉತ್ತೇಜನ ನೀಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರವು 57,613 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಅವರು ತಿಳಿಸಿದರು.

ಪಿಎಂ ಇ-ಬಸ್ ಸೇವಾ ಯೋಜನೆಗೆ ಮಾಡಲಾಗುವ ವೆಚ್ಚದಲ್ಲಿ 57,613 ಕೋಟಿ ರೂ. ಪೈಕಿ ಕೇಂದ್ರ ಸರ್ಕಾರವು 20 ಸಾವಿರ ಕೋಟಿ ರೂ. ಒದಗಿಸಲಿದೆ. ಮೂರು ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಿಗೆ ಇ-ಬಸ್‌ಗಳನ್ನು ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ, ಸಾರ್ವಜನಿಕ ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ 10,000 ಇ-ಬಸ್‌ಗಳೊಂದಿಗೆ ಸಿಟಿ ಬಸ್ ಕಾರ್ಯಾಚರಣೆಗಳನ್ನು ಮಾಡಲಾಗುತ್ತದೆ. ಈ ಯೋಜನೆಯು 10 ವರ್ಷಗಳ ಕಾಲ ಬಸ್ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ ಎಂದು ಅನುರಾಗ್ ಠಾಕೂರ್ ಅವರು ಮಾಹಿತಿ ನೀಡಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version