Site icon Vistara News

BJP March | ಬಂಗಾಳದಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಹಿಂಸಾಚಾರ, ದೀದಿ ಸರ್ಕಾರಕ್ಕೆ ಕೋರ್ಟ್‌ ನೋಟಿಸ್

mamata banerjee

ಕೋಲ್ಕೊತಾ: ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಬಿಜೆಪಿಯು ರಾಜ್ಯ ಸಚಿವಾಲಯದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವ ವೇಳೆ ನಡೆದ ಹಿಂಸಾಚಾರ ಪ್ರಕರಣವು (BJP March) ಕೋಲ್ಕೊತಾ ಹೈಕೋರ್ಟ್‌ ಮೆಟ್ಟಿಲೇರಿದ್ದು, ಈ ಕುರಿತು ವರದಿ ನೀಡುವಂತೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಪ್ರತಿಭಟನಾಕಾರರನ್ನು ಪೊಲೀಸರು ಸುಖಾಸುಮ್ಮನೆ ತಡೆದು, ಬಂಧಿಸಿದ್ದಾರೆ ಎಂದು ಬಿಜೆಪಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, “ಪ್ರತಿಭಟನೆ ನಡೆಸುವಾಗ ಗಲಾಟೆ, ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡದ ಹೊರತು ಪೊಲೀಸರು ಯಾರನ್ನೂ ಬಂಧಿಸುವಂತಿಲ್ಲ. ಹಿಂಸಾಚಾರ, ಬಂಧನದ ಕುರಿತು ಸೆ.೧೯ರೊಳಗೆ ರಾಜ್ಯ ಸರ್ಕಾರ ವರದಿ ನೀಡಬೇಕು” ಎಂದು ನಿರ್ದೇಶಿಸಿದೆ. ಇದೇ ದಿನ ವಿಚಾರಣೆ ನಡೆಸಲು ತೀರ್ಮಾನಿಸಿದೆ.

ಪ್ರತಿಭಟನೆ ನಡೆಸುವಾಗ ಪೊಲೀಸರು ನೂರಾರು ಬಿಜೆಪಿ ಕಾರ್ಯಕರ್ತರನ್ನು ಸೆಕೆಂಡ್‌ ಹೂಗ್ಲಿ ಬ್ರಿಡ್ಜ್‌ ಬಳಿ ತಡೆದರು. ಇದರಿಂದ ಕೆರಳಿದ ಕಾರ್ಯಕರ್ತರು ಗಲಾಟೆ ನಡೆಸಿದರು. ಬಳಿಕ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಸೇರಿ ಹಲವು ನಾಯಕರನ್ನು ಬಂಧಿಸಲಾಯಿತು. ಮಂಗಳವಾರ ಸಂಜೆ ಸುವೇಂದು ಅಧಿಕಾರಿ ಜೈಲಿನಿಂದ ಬಿಡುಗಡೆಯಾಗಿದ್ದು, “ನಾವು ನ್ಯಾಯಾಂಗ ಹೋರಾಟ ಮುಂದುವರಿಸುತ್ತೇವೆ” ಎಂದಿದ್ದಾರೆ.

ಪ್ರತಿಭಟನೆ ನಡೆಯುವ ಮೊದಲೇ ಪೊಲೀಸರು ಬ್ಯಾರಿಕೇಡ್‌ ಹಾಕಿ, ಅಶ್ರುವಾಯು, ಜಲಫಿರಂಗಿ ವ್ಯವಸ್ಥೆ ಮಾಡಿಕೊಂಡು ನಿಂತಿದ್ದರು. ಇದು ರಾಜ್ಯ ಸರ್ಕಾರದಿಂದ ಪ್ರತಿಭಟನೆ ತಡೆಯುವ ಹುನ್ನಾರ ಎಂದು ಬಿಜೆಪಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ | BJP March | ಬಂಗಾಳದಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಪೊಲೀಸರ ವಾಹನಕ್ಕೆ ಬೆಂಕಿ, ಸುವೇಂದು ಅಧಿಕಾರಿ ಬಂಧನ

Exit mobile version