Site icon Vistara News

iNCOVACC | ಕೊರೊನಾ ಲಸಿಕೆ ಬೂಸ್ಟರ್​ ಡೋಸ್​ ಪಡೆದಿರುವವರು ಈ ಇಂಟ್ರಾನೇಸಲ್​ ವ್ಯಾಕ್ಸಿನ್​ ತೆಗೆದುಕೊಳ್ಳಬಹುದಾ?

Can Not Take Nasal Vaccine After Booster Dose say NK Arora

ನವ ದೆಹಲಿ: ಮೂಗಿನ ಮೂಲಕ ತೆಗೆದುಕೊಳ್ಳುವ iNCOVACC ಇಂಟ್ರಾನೇಸಲ್​ ಲಸಿಕೆಗೆ ಬೆಲೆ ನಿಗದಿ ಮಾಡಲಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಇದರ ಬೆಲೆ ಒಂದು ಡೋಸ್​​ಗೆ 800 ರೂ. (ಜಿಎಸ್​ಟಿ ಸೇರಿ 840 ರೂಪಾಯಿ). ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ಡೋಸ್​ಗೆ 325 ರೂಪಾಯಿ. ಈ ಲಸಿಕೆಯನ್ನು ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ವಿತರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗಲಿದೆ. ಈಗಾಗಲೇ ಕೊವ್ಯಾಕ್ಸಿನ್​ ಅಥವಾ ಕೊವಿಶೀಲ್ಡ್​ ಲಸಿಕೆಗಳ ಎರಡೂ ಡೋಸ್​ ಪಡೆದ 18 ವರ್ಷ ಮೇಲ್ಪಟ್ಟವರು ಈ ಇಂಟ್ರಾನೇಸಲ್​ ಲಸಿಕೆಯನ್ನು ಬೂಸ್ಟರ್​ ಡೋಸ್​ನಂತೆ ಪಡೆಯಬಹುದು ಎಂದು ಹೇಳಲಾಗಿದೆ.

ಆದರೂ ಈ ಇಂಟ್ರಾನೇಸಲ್​ ಲಸಿಕೆ ಬಗ್ಗೆ ಕೆಲವು ಗೊಂದಲಗಳು ಹಾಗೇ ಉಳಿದಿವೆ. ಅದರಲ್ಲಿ ಮುಖ್ಯವಾಗಿ ಈಗಾಗಲೇ ಬೂಸ್ಟರ್​ ಡೋಸ್​ ತೆಗೆದುಕೊಂಡವರು ಮತ್ತೊಂದು ಬೂಸ್ಟರ್​ ಡೋಸ್​ ಆಗಿ ಈ iNCOVACC ಲಸಿಕೆಯನ್ನು ಪಡೆಯಬಹುದಾ ಎಂಬ ಪ್ರಶ್ನೆಯೂ ಉದ್ಭವ ಆಗಿದೆ. ಆದರೆ ಅದು ಸಾಧ್ಯವಿಲ್ಲ ಎನ್ನುತ್ತಾರೆ ಕೊವಿಡ್​ 19 ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಅಧ್ಯಕ್ಷ ಡಾ. ಎನ್​.ಕೆ.ಅರೋರಾ.

ಇಂಟ್ರಾನೇಸಲ್​ ಲಸಿಕೆಯ ಪ್ರಯೋಗ-ಫಲಿತಾಂಶಗಳನ್ನು ಹತ್ತಿರದಿಂದ ಬಲ್ಲ ಡಾ. ಎನ್​.ಕೆ.ಅರೋರಾ ಅವರು ಎನ್​ಡಿಟಿವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿ, ‘ಮೂಗಿನ ಮೂಲಕ ತೆಗದುಕೊಳ್ಳುವ iNCOVACC ಲಸಿಕೆಯನ್ನು ನಾವು ಮೊದಲ ಬೂಸ್ಟರ್​ ಲಸಿಕೆ ಎಂದೇ ಪರಿಗಣಿಸುತ್ತೇವೆ. ಅಂದರೆ, ಈಗಾಗಲೇ ಕೊವಿಡ್​ 19 ಬೂಸ್ಟರ್​ ಡೋಸ್​ (ಮುನ್ನೆಚ್ಚರಿಕಾ ಡೋಸ್​) ಪಡೆದಿರುವವರು ಮತ್ತೊಂದು ಡೋಸ್​ ಆಗಿ ನೇಸಲ್​ ಲಸಿಕೆಯನ್ನು ಪಡೆಯಲು ನಾವು ಶಿಫಾರಸ್ಸು ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಈಗ ಕೋವಿಡ್​ 19 ಲಸಿಕೆ ನಾಲ್ಕನೇ ಡೋಸ್​​ ಪಡೆಯುವುದರಿಂದ ಅದರಿಂದ ಏನೂ ಪ್ರಯೋಜನ ಇಲ್ಲ. ಒಬ್ಬ ಮನುಷ್ಯ ತನ್ನ ದೇಹಕ್ಕೆ ನಿರ್ಧಿಷ್ಟ ಸ್ವರೂಪದ ಪ್ರತಿಜನಕವನ್ನು ಪದೇಪದೇ ತೆಗೆದುಕೊಂಡರೆ, ಆತನ ದೇಹ ಆ ಪ್ರತಿಜನಕಕ್ಕೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸುತ್ತದೆ. ಹಾಗಾಗಬಾರದು ಎಂಬ ಕಾರಣಕ್ಕೇ ಮೊದಲ ಬಾರಿಗೆ mRNA ಲಸಿಕೆಗಳನ್ನು ಆರು ತಿಂಗಳ ಅಂತರದಲ್ಲಿ ಕೊಡಲಾಗಿದೆ. ಬಳಿಕ ಮೂರು ತಿಂಗಳ ಅಂತರದಲ್ಲಿ ಕೊಡಲಾಯಿತು. ಆ ಸಮಯದಲ್ಲಿ ಲಸಿಕೆ ಅಷ್ಟೇನೂ ಕೆಲಸ ಮಾಡಲಿಲ್ಲ. ಇದೀಗ ಬಹುತೇಕರು ಬೂಸ್ಟರ್​ ಡೋಸ್​ ತೆಗೆದುಕೊಂಡಿದ್ದಾರೆ. ಅವರಿಗೆ ಮತ್ತೆ ಈಗ ಕಡಿಮೆ ಅವಧಿಯಲ್ಲಿ ನಾಲ್ಕನೇ ಡೋಸ್​ ಕೊಡುವುದರಿಂದ ಅಂಥ ಪ್ರಯೋಜನ ಏನೂ ಇಲ್ಲ’ ಎಂದು ಅರೋರಾ ಹೇಳಿದ್ದಾರೆ.

ಇದನ್ನೂ ಓದಿ: iNCOVACC | ಮೂಗಿನ ಮೂಲಕ ತೆಗೆದುಕೊಳ್ಳುವ ಕೋವಿಡ್ 19​ ಲಸಿಕೆಗೆ ದರ ನಿಗದಿ; ಒಂದು ಡೋಸ್​ಗೆ 800 ರೂಪಾಯಿ

Exit mobile version