ನವದೆಹಲಿ: ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ರದ್ದಾಗಿದ್ದ ಯುಜಿಸಿ ನೆಟ್ (ಯುಜಿಸಿ-ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಹೊಸ ದಿನಾಂಕವನ್ನು ಘೋಷಣೆ ಮಾಡಿದೆ. ಯುಜಿಸಿ ನೆಟ್ ಪರೀಕ್ಷೆಯು ಆಗಸ್ಟ್ 21 ಹಾಗೂ ಸೆಪ್ಟೆಂಬರ್ 4ರಂದು ನಡೆಸಲಿದೆ. ಅದರಲ್ಲೂ, ಪರೀಕ್ಷೆಯಲ್ಲಿ ಅಕ್ರಮ ತಡೆಯುವ ದಿಸೆಯಲ್ಲಿ ಪೆನ್ ಹಾಗೂ ಪೇಪರ್ ಪದ್ಧತಿ ಬದಲಾಗಿ, ಕಂಪ್ಯೂಟರ್ ಆಧಾರಿತವಾಗಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಇದರ ಬೆನ್ನಲ್ಲೇ, ಆಲ್ ಇಂಡಿಯಾ ಆಉಷ್ ಪೋಸ್ಟ್ ಗ್ರ್ಯಾಜುಯೇಟ್ ಪ್ರವೇಶ ಪರೀಕ್ಷೆಯು (AIAPGET) ಜುಲೈ 6ರಂದು ನಡೆಸಲು ತೀರ್ಮಾನಿಸಲಾಗಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ-ನೆಟ್ 2024 ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಪರೀಕ್ಷೆಯನ್ನು ರದ್ದುಗೊಳಿಸಿತ್ತು. ನ್ಯಾಷನಲ್ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯುನಿಟ್ ಆಫ್ ಇಂಡಿಯನ್ ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್‌ನಿಂದ ಯುಜಿಸಿಗೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.
NTA UGC NET and CSIR NET new exam dates announced (now in CBT mode). pic.twitter.com/OhocsG6vQJ
— Upsc Civil Services Exam (@UpscforAll) June 28, 2024
ಜೂನ್ 18ರಂದು ಕರ್ನಾಟಕ ಸೇರಿ ದೇಶಾದ್ಯಂತ 317 ನಗರಗಳ 1,205 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 11 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೆಟ್‌ಗೆ ಹಾಜರಾಗಿದ್ದರು. ಈಗ ಪರೀಕ್ಷೆಯನ್ನು ರದ್ದುಗೊಳಿಸಿರುವ ಕಾರಣ ಶೀಘ್ರದಲ್ಲೇ ಹೊಸ ದಿನಾಂಕ ಘೋಷಿಸಲಾಗುತ್ತದೆ ಎಂದು ತಿಳಿದುಬಂದಿತ್ತು. ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಿಎಚ್.ಡಿ ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಬದಲು ಅಭ್ಯರ್ಥಿಯು ನೆಟ್‌ನಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲು ಯುಜಿಸಿಯು ಈಗಾಗಲೇ ಅನುಮೋದನೆ ನೀಡಿದೆ. ಹಾಗಾಗಿ, ಅಭ್ಯರ್ಥಿಗಳಿಗೆ ನೆಟ್ ಪ್ರಮುಖ ಸಂಗತಿಯಾಗಿದೆ.
ಜಂಟಿ ಸಿಎಸ್‌ಐಆರ್ ಯುಜಿಸಿ ನೆಟ್ ಪರೀಕ್ಷೆಗೂ ದಿನಾಂಕ ಘೋಷಣೆ
ದೇಶದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ (JRF) ಪಡೆಯಲು ಹಾಗೂ ಉಪನ್ಯಾಸಕರಾಗಿ ಅಥವಾ ಸಹಾಯ ಪ್ರಾಧ್ಯಾಪಕರಾಗಿ ಆಯ್ಕೆಯಾಗಲು ಅರ್ಹತೆ ಪಡೆಯಬೇಕಾದರೆ ಜಂಟಿ ಸಿಎಸ್‌ಐಆರ್ ಯುಜಿಸಿ ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಜೂನ್ 25 ಹಾಗೂ ಜೂನ್ 27ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಈ ಪರೀಕ್ಷೆಯನ್ನು ಜುಲೈ 25-27ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: Joint CSIR UGC NET: ನೆಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ಜಂಟಿ ಸಿಎಸ್‌ಐಆರ್ ಯುಜಿಸಿ ನೆಟ್ ಮುಂದೂಡಿಕೆ!