ನವದೆಹಲಿ: ದೇಶದಲ್ಲಿ ಗಡಿ, ಪ್ರದೇಶ, ಜಾತಿ, ಧರ್ಮ, ಭಾಷೆ, ಯೋಜನೆ, ಸೇನೆ, ಪಕ್ಷ… ಹೀಗೆ, ದೇಶದಲ್ಲಿ ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಇರುತ್ತದೆ ಅಥವಾ ಪಕ್ಷಗಳು ರಾಜಕೀಯ ಇರುವ ಹಾಗೆ ಮಾಡುತ್ತವೆ. ಇದಕ್ಕೆ ಉತ್ತಮ ನಿದರ್ಶನ ಎಂಬಂತೆ, ಕೊರೊನಾ (Coronavirus) ವಿಷಯದಲ್ಲೂ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ಅವರು ಪತ್ರ ಬರೆದಿದ್ದಾರೆ. ಯಾತ್ರೆ ವೇಳೆ ಕೊರೊನಾ ನಿಯಮ ಪಾಲಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಮಂಡಾವಿಯ ಪತ್ರಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಇದಕ್ಕೆ ಆರೋಗ್ಯ ಸಚಿವ ತಿರುಗೇಟು ನೀಡಿದ್ದಾರೆ.
“ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಹೆಚ್ಚಿನ ಜನರಿಗೆ ಕೊರೊನಾ ದೃಢಪಟ್ಟಿದೆ. ಯಾತ್ರೆಯಲ್ಲಿ ಪಾಲ್ಗೊಂಡ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಅವರಿಗೂ ಸೋಂಕು ತಗುಲಿದೆ. ಸೋಂಕು ಹರಡದಂತೆ ಕ್ರಮ ತೆಗೆದುಕೊಳ್ಳಿ ಎಂಬುದಾಗಿ ರಾಜಸ್ಥಾನದ ಮೂವರು ಸಂಸದರು ಪತ್ರ ಬರೆದಿದ್ದಾರೆ. ಹಾಗಾಗಿ, ಒಂದು ಕುಟುಂಬವು ನಿಯಮಗಳಿಗಿಂತ ಮೇಲು ಎಂಬುದಾಗಿ ಯೋಚಿಸುತ್ತಿದ್ದರೆ, ನಾನು ನನ್ನ ಕೆಲಸವನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್‌ಅನ್ನು ಟೀಕಿಸಿದ್ದಾರೆ.
ಮನ್ಸುಖ್ ಮಂಡಾವಿಯ ಪತ್ರ ಬರೆದಿದ್ದಕ್ಕೆ ಕಾಂಗ್ರೆಸ್ ಟೀಕಿಸಿತ್ತು. “ಭಾರತ್ ಜೋಡೋ ಯಾತ್ರೆಯನ್ನು ಕೇಂದ್ರ ಸರ್ಕಾರ ಗುರಿಯಾಗಿಸುತ್ತಿದೆ. ಭಾರತ್ ಜೋಡೋ ಯಾತ್ರೆ ವೇಳೆ ಮಾತ್ರ ಏಕೆ ನಿಯಮ ಪಾಲಿಸಬೇಕು? ಬೇರೆ ರಾಜ್ಯಗಳಲ್ಲಿ ಬಿಜೆಪಿ ನಡೆಸುತ್ತಿರುವ ಯಾತ್ರೆಗಳಿಗೆ ಪತ್ರ ಬರೆಯಲಾಗಿದೆಯೇ” ಎಂದು ಪ್ರಶ್ನಿಸಿತ್ತು. ಹಾಗಾಗಿ, ಕೊರೊನಾ ಹರಡದಂತೆ ತಡೆಯುವುದು ನನ್ನ ಕರ್ತವ್ಯ ಎಂದು ಮಂಡಾವಿಯ ಸ್ಪಷ್ಟಪಡಿಸಿದ್ದಾರೆ. ಬುಧವಾರ ಒಂದೇ ದಿನ ನಾಲ್ವರಿಗೆ ಓಮಿಕ್ರಾನ್ ಉಪತಳಿ ಬಿಎಫ್.7 ದೃಢಪಟ್ಟಿದೆ. ಹಾಗಾಗಿ, ಕೇಂದ್ರ ಸರ್ಕಾರವು ಹೆಚ್ಚಿನ ನಿಗಾ ವಹಿಸುತ್ತಿದೆ.
ಇದನ್ನೂ ಓದಿ | Coronavirus | ಚೀನಾದಲ್ಲಿ ಕೊರೊನಾ ಉಲ್ಬಣದ ಬೆನ್ನಲ್ಲೇ ಭಾರತದಲ್ಲಿ ಮೂವರಿಗೆ ಓಮಿಕ್ರಾನ್, ಏರ್‌ಪೋರ್ಟ್‌ನಲ್ಲಿ ತಪಾಸಣೆ