ನವದೆಹಲಿ: ದೇಶದ ಒಂದಲ್ಲ ಒಂದು ಭಾಗದಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ (Gang Rape), ಬಾಲಕಿಯರ ಮೇಲೆ ಗ್ಯಾಂಗ್‌ರೇಪ್‌ನಂತಹ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ಆಗೆಲ್ಲ ತಾತ್ಕಾಲಿಕವಾಗಿ ಜನರ ಆಕ್ರೋಶ ಕಟ್ಟೆಯೊಡೆದು, ಆರೋಪಿಗಳ ಬಂಧನವೂ ಆಗಿ ಕೆಲ ದಿನಗಳ ಬಳಿಕ ಪ್ರಕರಣ ಮರೆಯಾಗುತ್ತದೆ. ಆರೋಪಿಗಳೂ ಅಷ್ಟೇ ಜಾಮೀನು ಪಡೆದು ಹೊರಬರುತ್ತಾರೆ. ಆದರೆ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಲು ನೂತನ ಕಾನೂನುಗಳಲ್ಲಿ (Criminal Laws) ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.
ಹೌದು, ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸುವ ದಿಸೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ವಿಧೇಯಕಗಳನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ಕಾನೂನಿನ ಪ್ರಮುಖ ಅಂಶವಾಗಿದೆ.
ಅಮಿತ್ ಶಾ ಮಾಹಿತಿ
ಅತ್ಯಾಚಾರಿಗಳಿಗೆ ಹೀಗಿರಲಿದೆ ಶಿಕ್ಷೆ
ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದವರಿಗೆ 20 ವರ್ಷದವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬರಲಿದೆ. ಇನ್ನು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ನಿಬಂಧನೆಗಳು ಕೂಡ ನೂತನ ಕಾನೂನಿನಲ್ಲಿ ಇರಲಿವೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದರೆ, ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ.
ಇದನ್ನೂ ಓದಿ: ವಿಸ್ತಾರ Explainer: ಇನ್ನು ಜನನ ಮತ್ತು ಮರಣ ನೋಂದಣಿ ಕಡ್ಡಾಯ! ಏನಿದು ಹೊಸ ವಿಧೇಯಕ, ಯಾಕೆ?
ಇನ್ನು, ಅತ್ಯಾಚಾರದ ವ್ಯಾಖ್ಯಾನ, ಯಾವುದು ಅತ್ಯಾಚಾರ, ಲೈಂಗಿಕ ಕಿರುಕುಳಕ್ಕೆ ಯಾವ ರೀತಿ ಶಿಕ್ಷೆ ಎಂಬುದು ಸೇರಿ ಹಲವು ನಿಯಮಗಳನ್ನು ರೂಪಿಸಲಾಗಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಬಹುದಿನಗಳ ಆಗ್ರಹವಾಗಿದ್ದು, ಇದರ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.