Site icon Vistara News

ಲಂಡನ್‌ನಲ್ಲಿ ಸರ್ಜರಿಗೆ ಒಳಗಾದ ಕ್ಯಾ. ಅಮರಿಂದರ್‌ ಸಿಂಗ್‌; ವಾಪಸ್‌ ಬರುತ್ತಿದ್ದಂತೆ ಬಿಜೆಪಿ ಸೇರ್ಪಡೆ

Captain Amarinder Singh

ಚಂಡಿಗಢ್: ಪಂಜಾಬ್‌ ಮಾಜಿ ಮುಖ್ಯಮಂತ್ರಿ, ಪಂಜಾಬ್‌ ಲೋಕ್‌ ಕಾಂಗ್ರೆಸ್‌ ಪಾರ್ಟಿ ಸಂಸ್ಥಾಪಕ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 89ವರ್ಷದ ಅಮರಿಂದರ್‌ ಸಿಂಗ್‌ ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಲಂಡನ್‌ಗೆ ಹೋಗಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆ ಕೂಡ ಆಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂದಿನ ವಾರ ಅವರು ಭಾರತಕ್ಕೆ ಬಂದ ನಂತರ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಭಾನುವಾರ ಅಮರಿಂದರ್‌ ಸಿಂಗ್‌ಗೆ ಸರ್ಜರಿಯಾಗಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎನ್ನಲಾಗಿದೆ.

ಐದು ದಶಕಗಳಿಂದಲೂ ಕಾಂಗ್ರೆಸ್‌ನಲ್ಲಿದ್ದ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ 2021ರ ಮಾರ್ಚ್‌ನಲ್ಲಿ ಆ ಪಕ್ಷವನ್ನು ತೊರೆದಿದ್ದಾರೆ. 2002ರಿಂದ 2007 ಮತ್ತು 2017ರಿಂದ 2021ರವರೆಗೆ ಪಂಜಾಬ್‌ ಮುಖ್ಯಮಂತ್ರಿಯಾಗಿದ್ದ ಅವರು ಪಕ್ಷದ ಮೇಲೆ ಬೇಸರ ಪಟ್ಟುಕೊಂಡು ಹೊರಬಿದ್ದಿದ್ದರು. ಪಂಜಾಬ್‌ನ ಅಂದಿನ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ನವಜೋತ್‌ ಸಿಂಗ್‌ ಸಿಧು ಮತ್ತು ಅಮರಿಂದರ್‌ ಸಿಂಗ್‌ ನಡುವೆ ಇದ್ದ ಮನಸ್ತಾಪ ದೊಡ್ಡದಾದಾಗ, ಕಾಂಗ್ರೆಸ್‌ ಹೈಕಮಾಂಡ್‌ ನವಜೋತ್‌ ಸಿಂಗ್‌ ಸಿಧುವಿಗೆ ಮನ್ನಣೆ ನೀಡಿತು. ಅಮರಿಂದರ್‌ ಸಿಂಗ್‌ ಕಾಂಗ್ರೆಸ್‌ ಮತ್ತು ಸೋನಿಯಾ ಗಾಂಧಿ ವಿರುದ್ಧ ತುಂಬ ಬೇಸರ ಹೊರಹಾಕಿ, ನನಗೆ ಅವಮಾನವಾಗಿದೆ ಎಂದು ಹೇಳಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.

ಕಾಂಗ್ರೆಸ್‌ನಿಂದ ಹೊರಬಿದ್ದಾಗಲೇ ಅವರು ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವರು ಹೊಸ ಪಕ್ಷ ಪಂಜಾಬ್‌ ಲೋಕ್‌ ಕಾಂಗ್ರೆಸ್‌ ಪಾರ್ಟಿಯನ್ನು ಕಟ್ಟಿದರು. ಏಪ್ರಿಲ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇವರ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡೇ ಸ್ಪರ್ಧಿಸಿತ್ತು. ಪಟಿಯಾಲಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಮರಿಂದರ್‌ ಸೋತಿದ್ದರು. ಈಗಾಗಲೇ ಪಂಜಾಬ್‌ನ ಹಿರಿಯ ಕಾಂಗ್ರೆಸ್‌ ನಾಯಕರಾದ ಸುನೀಲ್‌ ಜಾಖರ್‌ ಇನ್ನಿತರರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟ ಒಂದೇ ವಾರದಲ್ಲಿ ಕಮಲ ಹಿಡಿದ ಸುನಿಲ್‌ ಜಾಖರ್‌

Exit mobile version