ಗಾಂಧಿನಗರ: ದೇಶದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ತ್ರಿವಳಿ ತಲಾಕ್ (Triple Talaq) ನಿಷೇಧಿಸಿದೆ. ಈಗ ಗುಜರಾತ್‌ನ ಬಿಜೆಪಿ ಕಾರ್ಪೊರೇಟರ್ ಸಲೀಂ ನೂರ್ ಮೊಹಮ್ಮದ್ ವೋರಾ ಅವರು ತಮ್ಮ ಪತ್ನಿಗೆ ತ್ರಿವಳಿ ತಲಾಕ್ ನೀಡಿದ್ದು, ಕಾರ್ಪೊರೇಟರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮೆಹ್ಸಾನಾ ಬಿಜೆಪಿ ಕಾರ್ಪೊರೇಟರ್ ಆದ ವೋರಾ ವಿರುದ್ಧ ಪತ್ನಿ ಸಿದ್ದಿಕಿ ಬನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. “ಕಳೆದ ಏಪ್ರಿಲ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಸಲೀಂ ನೂರ್ ಮೊಹಮ್ಮದ್ ನೋರಾ ಅವರು ಮೌಖಿಕವಾಗಿ ತ್ರಿವಳಿ ತಲಾಕ್ ನೀಡಿದ್ದಾರೆ. ಅಲ್ಲದೆ, ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಯೂ ತಲಾಕ್ ನೀಡಿದ್ದಾರೆ. ನನ್ನ ಕುಟುಂಬಸ್ಥರಿಗೂ ಪತ್ರದ ಮೂಲಕ ತ್ರಿವಳಿ ತಲಾಕ್ ಕಳುಹಿಸಿದ್ದಾರೆ. ನನ್ನ ಅತ್ತೆ-ಮಾವ ಕೂಡ ಗಂಡನ ಮನೆ ತೊರೆಯುವಂತೆ ಕಿರುಕುಳ ನೀಡಿದ್ದಾರೆ” ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಿದ್ದಿಕಿಬನ್ ನೀಡಿದ ದೂರಿನ ಅನ್ವಯ ವೋರಾ ವಿರುದ್ಧ ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಕಾಯ್ದೆ 2019ರ ಸೆಕ್ಷನ್‌ಗಳು, ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅನ್ವಯ ಕೇಸ್ ದಾಖಲಾಗಿದೆ. ಸಲೀಂ ವೋರಾ ಹಾಗೂ ಸಿದ್ದಿಕಿ ಬನ್ 2000ನೇ ಇಸವಿಯಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಇದನ್ನೂ ಓದಿ | Explainer | ತಲಾಖ್-ಇ-ಹಸನ್ ರದ್ದಿಗೆ ಆಗ್ರಹ, ಮಹಿಳೆಯರ ವಾದವೇನು? ಸುಪ್ರೀಂ ಕೋರ್ಟ್ ಹೇಳಿದ್ದೇನು?