ಜೈಪುರ, ರಾಜಸ್ಥಾನ: ದಿ ಕೇರಳ ಸ್ಟೋರಿ (The Kerala Story) ಸಿನಿಮಾ ವೀಕ್ಷಿಸಿದ ಬಳಿಕ ದ್ವೇಷ ಭಾಷಣ ಮಾಡಿದ ಹಿಂದೂ ಸಂಘಟನೆಗಳ ನಾಯಕಿ ಸಾಧ್ವಿ ಪ್ರಾಚಿ (Sadhvi Prachi) ವಿರುದ್ದ ಜೈಪುರದ ವಿದ್ಯಾಧರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295(ಎ) ಮತ್ತು ಐಟಿ ಕಾಯ್ದೆಯ ಅನುಸಾರ ಸಾಧ್ವಿ ಪ್ರಾಚಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ವಿದ್ಯಾಧರ ನಗರ ಪೊಲೀಸ್ ಠಾಣೆಯ ಅಧಿಕಾರಿ ವೀರೇಂದ್ರ ಕುಮಾರ್ ಅವರ ಹೇಳಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆ ಬಳಿಕ ಸಾಧ್ವಿ ಪ್ರಾಚಿ ಅವರು ದ್ವೇಷ ಭಾಷಣ ಮಾಡಿದ್ದರು. ಆ ಭಾಷಣದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ವಿದ್ಯಾಧರನಗರ ಪೊಲೀಸ್ ಠಾಣೆಯ ಎಎಸ್ಐ ಸಾಧ್ವಿ ಪ್ರಾಚಿ ವಿರುದ್ಧ ದೂರು ದಾಖಲಿಸಿದ್ದಾರೆ.
ಮೇ 14ರಂದು ಜೈಪುರದ ಫನ್ ಸ್ಕ್ವೇರ್‌ನಲ್ಲಿರುವ ಫನ್ ಸ್ಟಾರ್ ಸಿನಿಮಾ ದಿ ಕೇರಳ ಸ್ಟೋರಿ ಪ್ರದರ್ಶನ ಏರ್ಪಡಿಸಲಾಗಿತ್ತು. ಹಿಂದೂ ಯುವ ವಾಹಿನಿಯ ಕೆಲಸಗಾರರು ಕೇಶವ್ ಅರೋರಾ, ಆಶೀಶ್ ಸೋನಿ, ವಿಜೇಂದ್ರ ಅವರು ಈ ಸಿನಿಮಾಗಾಗಿ ಟಿಕೆಟ್ ಖರೀದಿಸಿದ್ದರು. ಸಾಧ್ವಿ ಪ್ರಾಚಿ ಹಾಗೂ ಭಾರತ್ ಶರ್ಮಾ ಅವರು ಅವರು ಸಿನಿಮಾ ವೀಕ್ಷಣೆ ಮಾಡಿದ್ದರು. ಸಿನಿಮಾ ಪ್ರದರ್ಶನದ ಬಳಿಕ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಿದ್ದರು ಎನ್ನಲಾಗುತ್ತಿದೆ.
The Kerala Story: ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ನಿಷೇಧಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್
ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಪಶ್ಚಿಮ ಬಂಗಾಳ (West Bengal)ದಲ್ಲಿ ಹೇರಿದ್ದ ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಹಾಗೇ, ದಿ ಕೇರಳ ಸ್ಟೋರಿ ಸಿನಿಮಾ (The Kerala Story) ಪ್ರದರ್ಶನಗೊಳ್ಳುತ್ತಿರುವ ಎಲ್ಲ ಥಿಯೇಟರ್ಗಳಿಗೂ ಸೂಕ್ತ ಭದ್ರತೆ ನೀಡಬೇಕು. ಈ ಮೂಲಕ ಅಲ್ಲಿನ ಜನರು ನಿರಾಳವಾಗಿ ಸಿನಿಮಾ ನೋಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ. ಕೇರಳ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಅಫ್ಘಾನಿಸ್ತಾನ ಮತ್ತು ಸಿರಿಯಾಕ್ಕೆ ಕರೆದುಕೊಂಡು ಹೋಗಿ ಇಸ್ಲಾಮ್ಗೆ ಮತಾಂತರ ಮಾಡಿ, ಐಸಿಸ್ಗೆ ಸೇರ್ಪಡೆಗೊಳಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾವನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಿ, ಮಮತಾ ಬ್ಯಾನರ್ಜಿ ಅವರು ಮೇ 8ರಂದು ಆದೇಶ ಹೊರಡಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಬ್ಯಾನ್ ಮಾಡಿದ್ದನ್ನು ಪ್ರಶ್ನಿಸಿ ಚಿತ್ರ ನಿರ್ಮಾಪಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್ಗೆ ಮತಾಂತರ ಮಾಡುವ/ಲವ್ ಜಿಹಾದ್ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೆ ಕಾಂಗ್ರೆಸ್, ಇತರ ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್ಗಳಿಗೆ, ಸುಪ್ರೀಂಕೋರ್ಟ್ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಬಿಡುಗಡೆಯಾಗಿತ್ತು. ಅದಾದ ಮೇಲೆ ಮಮತಾ ಬ್ಯಾನರ್ಜಿ ಈ ಸಿನಿಮಾ ಬಗ್ಗೆ ಕಿಡಿಕಾರಿದ್ದರು.
ಚಿತ್ರ ನಿರ್ಮಾಪಕರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ, ಪಶ್ಚಿಮ ಬಂಗಾಳದಲ್ಲಿ ಈ ಸಿನಿಮಾದ ವಸ್ತುವನ್ನೇ ಮುಖ್ಯವಾಗಿಟ್ಟು ನಿಷೇಧಿಸಲಾಗಿಲ್ಲ ಎಂಬುದು ಮೇಲ್ನೋಟಕ್ಕೇ ಗೋಚರಿಸುತ್ತಿದೆ. ಯಾಕೆ ನಿಷೇಧಿಸಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ರಾಜ್ಯ ನೀಡಿದ ಉತ್ತರವೂ ತೃಪ್ತಿದಾಯಕವಾಗಿಲ್ಲ. ಹೀಗಾಗಿ ಅದರ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸುತ್ತಿದ್ದೇವೆ ಎಂದು ಆದೇಶ ನೀಡಿದೆ.
ಇದನ್ನೂ ಓದಿ: The Kerala Story : 100 ಕೋಟಿ ರೂ. ಕಲೆಕ್ಷನ್ ಮಾಡಿದ ದಿ ಕೇರಳ ಸ್ಟೋರಿ: ಭರ್ಜರಿ ಪ್ರದರ್ಶನ!
ಇನ್ನು ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ಬೇಸಿಗೆ ರಜೆ ಬಳಿಕ ಜುಲೈನಲ್ಲಿ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಈ ಸಿನಿಮಾವನ್ನು ಹದಿಹರೆಯದ ಮಕ್ಕಳು, ಅದರಲ್ಲೂ ಹೆಣ್ಣುಮಕ್ಕಳು ನೋಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಎ ಸರ್ಟಿಫಿಕೇಟ್ ನೀಡಿದ್ದರಿಂದ ಅದನ್ನು 18ವರ್ಷ ಮೇಲ್ಪಟ್ಟವರು ಮಾತ್ರ ನೋಡಬೇಕಿದೆ. ಈ ಎ ಸರ್ಟಿಫಿಕೇಟ್ ತೆರವುಗೊಳಿಸುವಂತೆ ಒಂದಷ್ಟು ಅರ್ಜಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿವೆ. ಆ ವಿಚಾರಣೆಯನ್ನು ಸದ್ಯಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಕೋರ್ಟ್ ಹೇಳಿದೆ.
ದೇಶದ ಕುತೂಹಲಕರ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.