ನವದೆಹಲಿ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ (The Kashmir Files ) ಒಂದು ಅಶ್ಲೀಲ ಚಿತ್ರ ಹಾಗೂ ಅಪಪ್ರಚಾರವನ್ನು ಉದ್ದೇಶವಾಗಿಟ್ಟುಕೊಂಡು ನಿರ್ಮಿಸಿದ ಸಿನಿಮಾ ಎಂದು ಟೀಕಿಸಿದ್ದ ಐಎಫ್‌ಎಫ್‌ಐನ ಜ್ಯೂರಿ ಮುಖ್ಯಸ್ಥ, ಇಸ್ರೇಲಿ ಚಿತ್ರ ನಿರ್ಮಾಪಕ ನಾಡವ್ ಲ್ಯಾಪಿಡ್ ವಿರುದ್ಧ ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಅವರು ಗೋವಾ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ಆಧರಿಸಿದ ನೈಜ ಕಥೆಯ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಕುರಿತು ಲ್ಯಾಪಿಡ್ ಅವರು ಅಪಮಾನಕರ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಹಾಗಾಗಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121,153,153A ಮತ್ತು 295, 298 ಮತ್ತು 505 ಅಡಿಯಲ್ಲಿ ದೂರು ದಾಖಲಿಸಿಕೊಳ್ಳುವಂತೆ ವಿನೀತ್ ಜಿಂದಾಲ್ ಅವರು ಗೋವಾ ಪೊಲೀಸರನ್ನು ಕೋರಿದ್ದಾರೆ.
ಲ್ಯಾಪಿಡ್ ನೀಡಿದ ಹೇಳಿಕೆಯು ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಅವರ ಉದ್ದೇಶವನ್ನು ಸ್ಪಷ್ಟವಾಗಿ ಹೊಂದಿದೆ. ಸಾಮಾಜಿಕ ಕಾರ್ಯಕರ್ತ ಮತ್ತು ಧರ್ಮದಿಂದ ಹಿಂದೂ ಆಗಿರುವ ನನ್ನ ಧಾರ್ಮಿಕ ಭಾವನೆಗಳಿಗೆ ನಾಡವ್ ಲ್ಯಾಪಿಡ್ ನೀಡಿದ ಹೇಳಿಕೆಯಿಂದ ತೀವ್ರ ಘಾಸಿಯಾಗಿದೆ ಎಂದು ದೂರುದಾರ ನ್ಯಾಯವಾದಿ ವಿನೀತ್ ಜಿಂದಾಲ್ ತಮ್ಮ ದೂರಿನಲ್ಲಿ ಹೇಳಿದ್ದಾರೆ. ದೂರನ್ನು ಗೋವಾ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಸಲಾಗಿದೆ.
ಏನಿದು ವಿವಾದ?
ಗೋವಾದಲ್ಲಿ ನಡೆದ 53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪದಲ್ಲಿ ಐಎಫ್‌ಎಫ್‌ಐನ ಜ್ಯೂರಿ ಮುಖ್ಯಸ್ಥ, ಇಸ್ರೇಲಿ ಚಿತ್ರ ನಿರ್ಮಾಪಕ ನಾಡವ್ ಲ್ಯಾಪಿಡ್ ಅವರು, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ (The Kashmir Files ) ಒಂದು ಅಶ್ಲೀಲ ಚಿತ್ರ ಹಾಗೂ ಅಪಪ್ರಚಾರವನ್ನು ಉದ್ದೇಶವಾಗಿಟ್ಟುಕೊಂಡು ನಿರ್ಮಿಸಿದ ಸಿನಿಮಾ ಎಂದು ಟೀಕಿಸಿದ್ದಾರೆ. ಇದಕ್ಕೆ ವಿವಾದಕ್ಕೆ ಕಾರಣಾಗಿದೆ.
ಚಲನಚಿತ್ರೋತ್ಸವದಲ್ಲಿ 15ನೇ ಚಿತ್ರವಾಗಿದ್ದ ಕಾಶ್ಮೀರ್ ಫೈಲ್ಸ್ ನೋಡಿದಾಗ ನಮಗೆ ಆಘಾತವಾಯಿತು. ಇದು ಒಂದು ಅಶ್ಲೀಲ ಸಿನಿಮಾ. ಇದು ಅಪಪ್ರಚಾರದ ಅಂಶಗಳನ್ನು ಒಳಗೊಂಡಿದೆ. ಇಂಥ ಕಲಾತ್ಮಕ, ಸ್ಪರ್ಧಾತ್ಮಕ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲು ಸೂಕ್ತವಲ್ಲದ ಸಿನಿಮಾ. ನಾನು ನಿರ್ದಾಕ್ಷಿಣ್ಯವಾಗಿ, ಬಹಿರಂಗವಾಗಿ ನನ್ನ ಅಭಿಪ್ರಾಯವನ್ನು ಈ ವೇದಿಕೆಯಿಂದ ಹೇಳಲು ಬಯಸುತ್ತೇನೆ. ಕಲೆಯ ಹಿತಾಸಕ್ತಿ ದೃಷ್ಟಿಯಿಂದ ಇಂಥ ಚಲನಚಿತ್ರೋತ್ಸವದಲ್ಲಿ ಮುಕ್ತ ಹಾಗೂ ಕಟು ವಿಮರ್ಶೆಯ ಅಗತ್ಯತೆ ಇದೆ ಎಂದು ನಾಡವ್ ಲ್ಯಾಪಿಡ್ ಹೇಳಿದ್ದರು.
ಇದನ್ನೂ ಓದಿ | The Kashmir Files | ಕಾಶ್ಮೀರ್ ಫೈಲ್ಸ್‌ಗೆ ನಿರ್ಮಾಪಕನ ಅವಹೇಳನ: ಭಾರತೀಯರ ಕ್ಷಮೆಯಾಚಿಸಿದ ಇಸ್ರೇಲ್ ರಾಯಭಾರಿ