ನವದೆಹಲಿ: ಪ್ರಶ್ನೆಗಾಗಿ ಲಂಚ ಆರೋಪವನ್ನು (Cash for Query Case) ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (TMC MP Mahua Moitra) ಅವರನ್ನು ಲೋಕಸಭೆ ಸದಸ್ಯತ್ವದಿಂದ ಕಿತ್ತು ಹಾಕಬೇಕು (Expel From Lok Sabha) ಎಂದು ಸಂಸದೀಯ ನೈತಿಕ ಸಮಿತಿಯು ಶಿಫಾರಸು ಮಾಡಿದೆ(parliamentary Ethics Committee). ಇದಕ್ಕೂ ಮೊದಲು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹುವಾ ಮೋಯಿತ್ರ ವಿರುದ್ಧ ಸಿಬಿಐ ತನಿಖೆ ಕೈಗೊಳ್ಳುವಂತೆ ಲೋಕಪಾಲ್ ಸೂಚನೆ ನೀಡಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಹೇಳಿಕೊಂಡಿದ್ದರು. ಮಹುವಾ ಮೊಯಿತ್ರಾ ಅವರ ಕ್ರಮಗಳನ್ನು “ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಅಪರಾಧ” ಎಂದು ಕರೆದಿರುವ ಸಮಿತಿಯು ಕಠಿಣ ಶಿಕ್ಷೆಗೆ ಕರೆ ನೀಡುತ್ತದೆ ಎಂದು ಹೇಳಿದೆ. ಸಮಿತಿಯು ಸುಮಾರು 500 ಪುಟಗಳ ವರದಿಯನ್ನು ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ.
ಮಹುವಾ ಮೊಯಿತ್ರಾ ಅವರು “ಅನಧಿಕೃತ ವ್ಯಕ್ತಿಗಳೊಂದಿಗೆ” ಯೂಸರ್ ಐಡಿಯನ್ನು ಹಂಚಿಕೊಂಡಿದ್ದಾರೆ. ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು ಮತ್ತು ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಇದು ಅತ್ಯಂತ “ಗಂಭೀರವಾದ ದುಷ್ಕೃತ್ಯ”ವಾಗಿದ್ದು, “ಗಂಭೀರ ಶಿಕ್ಷೆ” ಯೋಗ್ಯವಾಗಿದೆ ಎಂದು ಸಂಸದೀಯ ನೈತಿಕ ಸಮಿತಿಯು ತೀರ್ಮಾನಿಸಿದೆ.
ಮಹುವಾ ಮೊಯಿತ್ರಾ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ನಡುವಿನ ನಗದು ವಹಿವಾಟಿನ ಹಣದ ಜಾಡಿನ ಭಾಗವಾಗಿ ಭಾರತ ಸರ್ಕಾರವು ಕಾನೂನು, ಸಾಂಸ್ಥಿಕ ಮತ್ತು ಕಾಲಮಿತಿಯಲ್ಲಿ ತನಿಖೆ ನಡೆಸಬೇಕು ಎಂದು ವರದಿ ಶಿಫಾರಸು ಮಾಡಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಸ್ಪೀಕರ್‌ಗೆ ವರದಿ ಸಲ್ಲಿಸಲಾಗುವುದು ಮತ್ತು ಚರ್ಚೆಯ ನಂತರ ಕ್ರಮ ಕೈಗೊಳ್ಳಲಾಗುವುದು. ಈ ಮಧ್ಯೆ, ನಾಳೆ ಸಂಜೆ 4 ಗಂಟೆಗೆ ಮೊಯಿತ್ರಾ ಸಮಿತಿಯ ಮುಂದೆ ಹಾಜರಾಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಸಂಸದೆ ಮಹುವಾ ಮೋಯಿತ್ರಾ ವಿರುದ್ಧ ಸಿಬಿಐ ತನಿಖೆ!
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ (Cash for Query Case) ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (TMC MP Mahua Moitra) ಅವರಿಗೆ ಸಂಕಷ್ಟ ಎದುರಾಗಿದೆ. ಈ ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಲೋಕಪಾಲ್(Lokpal), ಕೇಂದ್ರ ತನಿಖಾ ದಳಕ್ಕೆ(CBI) ಸೂಚಿಸಿರುವ ಮಾಹಿತಿಯನ್ನು ಭಾರತೀಯ ಜನತಾ ಪಾರ್ಟಿಯ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಅವರು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ನಾನು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಲೋಕಪಾಲ್ ಸಂಸ್ಥೆಯು, ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡಿದ ಮಹುವಾ ಮೋಯಿತ್ರಾ ಅವರ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಕೈಗೊಳ್ಳುವಂತೆ ಕೇಂದ್ರ ತನಿಖಾ ದಳಕ್ಕೆ ಸೂಚಿಸಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಟ್ವೀಟ್ ಮಾಡಿದ್ದಾರೆ.
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ವಿರುದ್ಧ ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರು ಎದುರಾಳಿ ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದರು.
ಈ ಸುದ್ದಿಯನ್ನೂ ಓದಿ: MP Mahua Moitra: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಸಂಸದೆ ಮಹುವಾ ಮೋಯಿತ್ರಾ! ಬಿಜೆಪಿ ಆರೋಪ