ನವದೆಹಲಿ: ಪ್ರಶ್ನೆಗಾಗಿ ಲಂಚ ಪ್ರಕರಣಕ್ಕೆ (Cash for Query Case) ಸಂಬಂಧಿಸಿದಂತೆ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (TMC MP Mahua Moitra) ಅವರನ್ನು ಸಂಸತ್ತಿನಿಂದ ಉಚ್ಚಾಟಿಸುವ ಶಿಫಾರಸು ವರದಿಯನ್ನು (Panel Report) ಡಿಸೆಂಬರ್ 5ರಂದು ಲೋಕಸಭೆಯಲ್ಲಿ (Lok Sabha) ಮಂಡಿಸಲಾಗುತ್ತಿದೆ. ಲೋಕಸಭೆ ಕಾರ್ಯದರ್ಶಿ ಹಂಚಿಕೆ ಮಾಡಿರುವ ಅಜೆಂಡಾ ದಾಖಲೆಗಳ ಪ್ರಕಾರ, ನೈತಿಕ ಸಮಿತಿಯು ಅಧ್ಯಕ್ಷ ವಿನೋದ್ ಕುಮಾರ್ ಸೋನಕರ್ ಅವರು, ಸಮಿತಿಯ ವರದಿಯನ್ನು ಮಂಡಿಸಲಿದ್ದಾರೆ.
ನವೆಂಬರ್ 9 ರಂದು ನಡೆದ ಸಭೆಯಲ್ಲಿ ಸಮಿತಿಯು ಪ್ರಶ್ನೆಗಾಗಿ ನಗದು ಆರೋಪದ ಮೇಲೆ ಲೋಕಸಭೆಯಿಂದ, ಮಹುವಾ ಮೋಯಿತ್ರಾ ಅವರನ್ನು ಉಚ್ಚಾಟಿಸಲು ಶಿಫಾರಸು ಮಾಡುವ ತನ್ನ ವರದಿಯನ್ನು ಅಂಗೀಕರಿಸಿತು. ಸಮಿತಿಯ 6 ಸದಸ್ಯರು ಈ ವರದಿಯ ಪರವಾಗಿ ತಮ್ಮ ಮತ ಚಲಾಯಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡಿರುವ ಸಂಸದೆ ಪ್ರಣೀತ್ ಕೌರ್ ಕೂಡ ವರದಿಯ ಪರವಾಗಿ ಮತ ಚಲಾಯಿಸಿದ್ದಾರೆ. ಪ್ರತಿಪಕ್ಷಗಳಿಗೆ ಸೇರಿದ ಸಮಿತಿ ನಾಲ್ವರು ಸದಸ್ಯರು ವರದಿಯ ವಿರುದ್ಧವಾಗಿ ಮತಚಲಾಯಿಸಿದ್ದರು.
ಪ್ರತಿಪಕ್ಷದ ಸದಸ್ಯರು ವರದಿಯನ್ನು ಫಿಕ್ಸೆಡ್ ಮ್ಯಾಚ್ ಎಂದು ಕರೆದಿದ್ದಾರೆ. ಸಮಿತಿಯು ಪರಿಶೀಲಿಸಿದ ಬಿಜೆಪಿ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಸಲ್ಲಿಸಿದ ದೂರಿಗೆ ಯಾವುದೇ ಸಾಕ್ಷಗಳ ಬೆಂಬಲವೂ ಇಲ್ಲ ಎಂದು ಅವರು ಹೇಳಿದ್ದಾರೆ. ಸಮಿತಿಯ ಶಿಫಾರಸಿನ ಪರವಾಗಿ ಸದನವು ಮತ ಚಲಾಯಿಸಿದರೆ ಮಾತ್ರ ಮೋಯಿತ್ರಾ ಅವರನ್ನು ಉಚ್ಚಾಟಿಸಬಹುದು. ಚಳಿಗಾಲದ ಸಂಸತ್ ಅಧಿವೇಶನವು ಡಿಸೆಂಬರ್ 5, ಸೋಮವಾರದಿಂದ ಆರಂಭವಾಗಿ ಡಿಸೆಂಬರ್ 22ವರೆಗೂ ನಡೆಯಲಿದೆ.
ಸಿಬಿಐನಿಂದಲೂ ಪ್ರಶ್ನೆಗಾಗಿ ಲಂಚ ಪ್ರಕರಣದ ತನಿಖೆ
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ (Cash for Query Case) ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (TMC MP Mahua Moitra) ಅವರಿಗೆ ಸಂಕಷ್ಟ ಎದುರಾಗಿದೆ. ಈ ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಲೋಕಪಾಲ್(Lokpal), ಕೇಂದ್ರ ತನಿಖಾ ದಳಕ್ಕೆ(CBI) ಸೂಚಿಸಿರುವ ಮಾಹಿತಿಯನ್ನು ಭಾರತೀಯ ಜನತಾ ಪಾರ್ಟಿಯ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಅವರು ಮೂರು ವಾರಗಳ ಹಿಂದೆಯೇ ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದರು.
ನಾನು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಲೋಕಪಾಲ್ ಸಂಸ್ಥೆಯು, ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡಿದ ಮಹುವಾ ಮೋಯಿತ್ರಾ ಅವರ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಕೈಗೊಳ್ಳುವಂತೆ ಕೇಂದ್ರ ತನಿಖಾ ದಳಕ್ಕೆ ಸೂಚಿಸಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಟ್ವೀಟ್ ಮಾಡಿದ್ದರು. ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ವಿರುದ್ಧ ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರು ಎದುರಾಳಿ ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದರು.
ಈ ಸುದ್ದಿಯನ್ನೂ ಓದಿ: Cash for Query Case: ಸಂಸತ್ತಿನಿಂದ ಮಹುವಾ ಉಚ್ಚಾಟಿಸಲು ಸಮಿತಿಯಿಂದ 6:4 ಶಿಫಾರಸು!